ವೃತ್ತಿನಿರತ ಪತ್ರಕರ್ತರ ಹತ್ಯೆ ಪ್ರಮಾಣ 30% ಹೆಚ್ಚಳ: ಐಎಫ್‌ಜೆ ವರದಿ

Update: 2022-12-09 17:17 GMT

ಬ್ರಸೆಲ್ಸ್, ಡಿ.9: ಉಕ್ರೇನ್ ಯುದ್ಧ, ಹೈತಿಯಲ್ಲಿನ ಗೊಂದಲ ಹಾಗೂ ಮೆಕ್ಸಿಕೋದಲ್ಲಿ ಕ್ರಿಮಿನಲ್ ತಂಡಗಳ ಹಿಂಸಾಚಾರ ಹೆಚ್ಚಿರುವುದರಿಂದ 2022ರಲ್ಲಿ ವೃತ್ತಿನಿರತ ಪತ್ರಕರ್ತರ ಹತ್ಯೆಯ ಪ್ರಮಾಣದಲ್ಲಿ 30%ದಷ್ಟು ಹೆಚ್ಚಳವಾಗಿದೆ ಎಂದು ಅಂತರಾಷ್ಟ್ರೀಯ ಪತ್ರಕರ್ತರ ಒಕ್ಕೂಟ(ಐಎಫ್‌ಜೆ) ವರದಿ ಮಾಡಿದೆ.

ಡಿಸೆಂಬರ್‌ವರೆಗೆ ವಿಶ್ವದಾದ್ಯಂತ 67 ಪತ್ರಕರ್ತರು ಹಾಗೂ ಮಾಧ್ಯಮದ ಸಿಬಂದಿ ಹತರಾಗಿದ್ದು ಕಳೆದ ವರ್ಷದ ಇದೇ ಅವಧಿಯಲ್ಲಿ 47 ಪತ್ರಕರ್ತರ ಹತ್ಯೆಯಾಗಿತ್ತು. ಅಲ್ಲದೆ ಈ ವರ್ಷ 375 ವೃತ್ತಿನಿರತ ಪತ್ರಕರ್ತರನ್ನು ಬಂಧಿಸಲಾಗಿದ್ದು ಕಳೆದ ವಷಘ 365 ಪತ್ರಕರ್ತರು ಬಂಧನಲ್ಲಿದ್ದರು. ಚೀನಾ, ಮ್ಯಾನ್ಮಾರ್ ಮತ್ತು ಟರ್ಕಿಯಲ್ಲಿ ಪತ್ರಕರ್ತರ ಬಂಧನ ಪ್ರಕರಣ ಅಧಿಕವಾಗಿದೆ. ಉಕ್ರೇನ್ ಯುದ್ಧವನ್ನು ವರದಿ ಮಾಡುತ್ತಿದ್ದ 12 ಪತ್ರಕರ್ತರು ಹತರಾಗಿದ್ದಾರೆ. ಪಾಕಿಸ್ತಾನದಲ್ಲಿ ಈ ವರ್ಷ ಐವರು ಪತ್ರಕರ್ತರ ಹತ್ಯೆಯಾಗಿದೆ. ಕೊಲಂಬಿಯ ಮತ್ತು ಫಿಲಿಪ್ಪೀನ್ಸ್‌ಗಳಲ್ಲಿ ಪತ್ರಕರ್ತರಿಗೆ ಅಪಾಯ ಮುಂದುವರಿದಿದೆ ಎಂದು ವರದಿ ಹೇಳಿದೆ.ಪೆಲೆಸ್ತೀನ್ ನಿರಾಶ್ರಿತರ ಶಿಬಿರದ ಬಳಿ ವರದಿ ಮಾಡುತ್ತಿದ್ದ ಅಲ್‌ಜಝೀರಾದ ಪತ್ರಕರ್ತೆ ಶಿರೀನ್‌ರ ಹತ್ಯೆಯ ಬಗ್ಗೆಯೂ ವರದಿ ಉಲ್ಲೇಖಿಸಿದೆ.

ಹತ್ಯೆಗೀಡಾದ ಮಾಧ್ಯಮ ಕಾರ್ಯಕರ್ತರ ಪ್ರಮಾಣ ಹೆಚ್ಚುತ್ತಿರುವುದರಿಂದ ಪತ್ರಕರ್ತರು ಮತ್ತು ಮುಕ್ತ ಪತ್ರಿಕೋದ್ಯಮವನ್ನು ರಕ್ಷಿಸಲು ಹೆಚ್ಚು ಸದೃಢ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸರಕಾರಗಳನ್ನು ಐಎಫ್‌ಜೆ ಆಗ್ರಹಿಸಿದೆ. ‘ಕ್ರಮ ಕೈಗೊಳ್ಳುವಲ್ಲಿನ ವೈಫಲ್ಯವು ಮಾಹಿತಿಯ ಮುಕ್ತ ಹರಿವನ್ನು ನಿಗ್ರಹಿಸುತ್ತದೆ. ಅಧಿಕಾರ ಮತ್ತು ಪ್ರಭಾವಿಗಳು ತಪ್ಪು ಮಾಡಿದರೂ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಪರಿಸ್ಥಿತಿ ಮುಂದುವರಿಯಲು ಕಾರಣವಾಗುತ್ತದೆ’ ಎಂದು ಐಎಫ್‌ಜೆ ಪ್ರಧಾನ ಕಾರ್ಯದರ್ಶಿ ಅಂಥೋನಿ ಬೆಲಂಗರ್ ಹೇಳಿದ್ದಾರೆ.

Similar News