ವಿಶ್ವಕಪ್ ಕ್ವಾರ್ಟರ್ ಫೈನಲ್ ನಲ್ಲಿ ಬ್ರೆಝಿಲ್ ಗೆ ಆಘಾತಕಾರಿ ಸೋಲು: ದುಃಖ ತಡೆಯಲಾರದೆ ಕಣ್ಣೀರಿಟ್ಟ ನೇಮರ್

Update: 2022-12-10 14:11 GMT

ದೋಹಾ: ಹೊಸ ಪೀಳಿಗೆಯ ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾದ ನೇಮರ್ ಜೂನಿಯರ್ ಶುಕ್ರವಾರ ಕ್ರೊಯೇಷಿಯಾ ವಿರುದ್ಧದ FIFA ವಿಶ್ವಕಪ್ 2022 ಕ್ವಾರ್ಟರ್-ಫೈನಲ್‌ನಲ್ಲಿ ಬ್ರೆಝಿಲ್ ತಂಡ  ಆಘಾತಕಾರಿ ಸೋಲನುಭವಿಸಿದ ನಂತರ  ದುಃಖ ತಡೆಯಲಾರದೆ ಮೈದಾನದಲ್ಲಿ ಕುಳಿತುಕೊಂಡು ಕಣ್ಣೀರಿಟ್ಟರು. ಸಹ  ಆಟಗಾರರು ಅವರನ್ನು ಸಮಾಧಾನಪಡಿಸಲು ಯತ್ನಿಸಿದರು.

ಕ್ವಾರ್ಟರ್ ಫೈನಲ್ ನಲ್ಲಿ ನಿಗದಿತ ಸಮಯದಲ್ಲಿ ಗೋಲು ಬರಲಿಲ್ಲ. ನೇಮರ್  ಅವರು ಹೆಚ್ಚುವರಿ-ಸಮಯದಲ್ಲಿ ಗೋಲು ಗಳಿಸಿದಾಗ ಬ್ರೆಝಿಲ್ ಸೆಮಿಫ್-ಫೈನಲ್‌ಗೆ ತಲುಪುವ ವಿಶ್ವಾಸದಲ್ಲಿತ್ತು. ಆದರೆ ಬ್ರೂನೋ ಪೆಟ್‌ಕೋವಿಕ್ ಗೋಲು ಗಳಿಸಿ ಕ್ರೊಯೇಶಿಯಾ 1-1 ರಿಂದ ಸಮಬಲ ಸಾಧಿಸಲು ಕಾರಣರಾದರು. ಆಗ ಫಲಿತಾಂಶ ನಿರ್ಧರಿಸಲು  ಪೆನಾಲ್ಟಿ ಶೂಟೌಟ್‌ ಮೊರೆ ಹೋಗಲಾಯಿತು. ಪೆನಾಲ್ಟಿ ಶೂಟೌಟ್ ನಲ್ಲಿ ತನ್ನ ಕರಾಮತ್ತು ತೋರಿದ  ಕ್ರೊಯೇಶಿಯಾ  ತಂಡ ಬ್ರೆಝಿಲ್ ಅನ್ನು 4-2 ಗೋಲುಗಳಿಂದ ಸೋಲಿಸಿ ಸೆಮಿಫೈನಲ್‌ಗೆ ಅರ್ಹತೆ ಗಳಿಸಿತು.

ಈ ಸೋಲಿನೊಂದಿಗೆ 6ನೇ ಬಾರಿ ವಿಶ್ವಕಪ್ ಎತ್ತಿ ಹಿಡಿಯುವ ಬ್ರೆಝಿಲ್ ಕನಸು ಭಗ್ನಗೊಂಡಿತು. ಹೀಗಾಗಿ ನೇಮರ್ ಜೂನಿಯರ್ ಗೆ ಸಾಂತ್ವನ ಹೇಳುವುದು ಕಷ್ಟವಾಯಿತು.

ಖತರ್ ವಿಶ್ವಕಪ್‌ನಲ್ಲಿ ತಮ್ಮನ್ನು ಬೆಂಬಲಿಸಲು ಭಾರೀ ಸಂಖ್ಯೆಯಲ್ಲಿ ಬಂದಿದ್ದ ಬ್ರೆಝಿಲ್ ಅಭಿಮಾನಿಗಳಿಗೆ ಗುಡ್ ಬೈ  ಹೇಳುವಾಗ ಪ್ಯಾರಿಸ್ ಸೇಂಟ್-ಜರ್ಮೈನ್ ಫಾರ್ವರ್ಡ್ ಆಟಗಾರ ನೇಮರ್ ಗೆ ಕಣ್ಣೀರು ತಡೆಯಲು ಸಾಧ್ಯವಾಗಲಿಲ್ಲ. ನೇಮರ್ ಅವರ ಕೆಲವು ಸಹ ಆಟಗಾರರು ಸಹ ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಆದರೆ ಅದರಲ್ಲಿ ಯಶಸ್ವಿಯಾಗಲಿಲ್ಲ.

ಆರನೇ ಪ್ರಶಸ್ತಿಗಾಗಿ ಬ್ರೆಝಿಲ್ ಕನಿಷ್ಠ ನಾಲ್ಕು ವರ್ಷಗಳ ಕಾಲ ಕಾಯಬೇಕಾಗುತ್ತದೆ.  2026 ರ ವೇಳೆಗೆ ಅದು ಕೊನೆಯದಾಗಿ ಪ್ರಶಸ್ತಿ  ಗೆದ್ದು 24 ವರ್ಷಗಳು ಆಗುತ್ತವೆ.

ತಮ್ಮ ವೃತ್ತಿಜೀವನದ ಅಂತಿಮ ಫಿಫಾ ವಿಶ್ವಕಪ್‌ನಲ್ಲಿ ಆಡುತ್ತಿರುವ ಬ್ರೆಝಿಲ್‌ನ ಅನುಭವಿ ಸೆಂಟರ್-ಬ್ಯಾಕ್ ಥಿಯಾಗೊ ಸಿಲ್ವಾ ಅವರು ಟ್ರೋಫಿಯನ್ನು ಎತ್ತದೆ ತಮ್ಮ ವೃತ್ತಿಜೀವನಕ್ಕೆ ತೆರೆ ಎಳೆಯಬೇಕಾಯಿತು ಎಂಬ ವಿಚಾರವನ್ನುಒಪ್ಪಿಕೊಂಡರು.

Similar News