ಭಾರತೀಯ ಒಲಿಂಪಿಕ್ಸ್ ಅಸೋಸಿಯೇಶನ್‌ನ ಮೊದಲ ಮಹಿಳಾ ಅಧ್ಯಕ್ಷರಾಗಿ ಪಿ.ಟಿ. ಉಷಾ ಆಯ್ಕೆ

Update: 2022-12-10 15:11 GMT

 ಹೊಸದಿಲ್ಲಿ, ಡಿ.10:‘ ಓಟದ ರಾಣಿ’ ಖ್ಯಾತಿಯ ಪಿ.ಟಿ. ಉಷಾ ಅವರು ಶನಿವಾರ ಭಾರತೀಯ ಒಲಿಂಪಿಕ್ಸ್ ಅಸೋಸಿಯೇಶನ್(ಐಒಎ) ಮೊದಲ ಮಹಿಳಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ದೇಶದ ಕ್ರೀಡಾ ಆಡಳಿತದಲ್ಲಿ ಹೊಸ ಯುಗಕ್ಕೆ ನಾಂದಿ ಹಾಡಿದ್ದಾರೆ.

ಏಶ್ಯನ್ ಗೇಮ್ಸ್‌ನಲ್ಲಿ ಹಲವು ಬಾರಿ ಚಿನ್ನದ ಪದಕ ವಿಜೇತೆ ಹಾಗೂ 1984ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ 400 ಮೀ.ಹರ್ಡಲ್ಸ್ ಫೈನಲ್‌ನಲ್ಲಿ 4ನೇ ಸ್ಥಾನ ಪಡೆದಿದ್ದ 58ರ ಹರೆಯದ ಉಷಾ ಅವರು ಚುನಾವಣೆಯಲ್ಲಿ ಉನ್ನತ ಹುದ್ದೆಗೆ ಅವಿರೋಧವಾಗಿ ಆಯ್ಕೆಯಾದರು ಎಂದು ಶನಿವಾರ ಅಧಿಕೃತವಾಗಿ ಘೋಷಿಸಲಾಯಿತು.

ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಾಧೀಶರಾದ ಎಲ್.ನಾಗೇಶ್ವರ ರಾವ್ ಅವರ ಮೇಲ್ವಿಚಾರಣೆಯಲ್ಲಿ ಐಒಎ ಚುನಾವಣೆ ನಡೆಯಿತು. ಕಳೆದ ತಿಂಗಳು ಪ್ರಮುಖ ಹುದ್ದೆಗೆ ಉಷಾ ಮಾತ್ರ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಅವರು ಅವಿರೋಧವಾಗಿ ಆಯ್ಕೆಯಾಗುವುದು ಖಚಿತವಾಗಿತ್ತು. ಜುಲೈನಲ್ಲಿ ಬಿಜೆಪಿಯಿಂದ ರಾಜ್ಯಸಭಾ ಸದಸ್ಯರಾಗಿ ನಾಮನಿರ್ದೇಶನಗೊಂಡಿರುವ ಉಷಾ ವಿರುದ್ಧ ಯಾರೂ ಕೂಡ ನಾಮಪತ್ರ ಸಲ್ಲಿಸಿರಲಿಲ್ಲ.

ಉಷಾ ಅವರು 95 ವರ್ಷಗಳ ಐಒಎ ಇತಿಹಾಸದಲ್ಲಿ ಅಧ್ಯಕ್ಷ ಸ್ಥಾನಕ್ಕೇರಿರುವ ಮೊದಲ ಒಲಿಂಪಿಯನ್ ಹಾಗೂ ಮೊದಲ ಅಂತರ್‌ರಾಷ್ಟ್ರೀಯ ಪದಕ ವಿಜೇತೆಯಾಗಿದ್ದಾರೆ. 2000ರಲ್ಲಿ ನಿವೃತ್ತಿಯಾಗುವ ಮೊದಲು ಎರಡು ದಶಕಗಳ ಕಾಲ ಭಾರತ ಹಾಗೂ ಏಶ್ಯನ್ ಅತ್ಲೆಟಿಕ್ಸ್‌ನಲ್ಲಿ ಪ್ರಾಬಲ್ಯ ಮೆರೆದಿದ್ದ ಉಷಾ ಅವರು ತಮ್ಮ ಯಶಸ್ಸಿನ ಕಿರೀಟಕ್ಕೆ ಮತ್ತೊಂದು ಗರಿ ಸೇರಿಸಿಕೊಂಡಿದ್ದಾರೆ.

ಉಷಾ ಅವರು ಮಹಾರಾಜ ಯಾದವೀಂದ್ರ ಸಿಂಗ್ ನಂತರ ಐಒಎ ಮುಖ್ಯಸ್ಥರಾಗಿ ದೇಶವನ್ನು ಪ್ರತಿನಿಧಿಸಿದ ಮೊದಲ ಕ್ರೀಡಾಳುವಾಗಿದ್ದಾರೆ. ಸಿಂಗ್ ಅವರು 1934ರಲ್ಲಿ ಏಕೈಕ ಟೆಸ್ಟ್ ಪಂದ್ಯವನ್ನು ಆಡಿದ್ದರು.
 

Similar News