ಫಿಫಾ ವಿಶ್ವಕಪ್: ಮೊದಲ ಬಾರಿ ಸೆಮಿ ಫೈನಲ್‌ಗೆ ಲಗ್ಗೆ ಇಟ್ಟ ಮೊರೊಕ್ಕೊ

ಪೋರ್ಚುಗಲ್‌ಗೆ 0-1 ಸೋಲು, ಮೊದಲ ಬಾರಿ ಅಂತಿಮ-4ರ ಘಟ್ಟ ತಲುಪಿದ ಆಫ್ರಿಕನ್-ಅರಬ್ ದೇಶ

Update: 2022-12-10 17:36 GMT

 ದೋಹಾ, ಡಿ.10: ಫಿಫಾ ವಿಶ್ವಕಪ್‌ನ ಮೂರನೇ ಕ್ವಾರ್ಟರ್ ಫೈನಲ್‌ನಲ್ಲಿ ಮೊರೊಕ್ಕೊ ತಂಡ ಪೋರ್ಚುಗಲ್ ತಂಡವನ್ನು 1-0 ಗೋಲು ಅಂತರದಿಂದ ಮಣಿಸಿ ಇತಿಹಾಸ ನಿರ್ಮಿಸಿದೆ. ವಿಶ್ವಕಪ್ ಟೂರ್ನಿಯಲ್ಲಿ ಮೊತ್ತ ಮೊದಲ ಬಾರಿ ಸೆಮಿ ಫೈನಲ್ ತಲುಪಿರುವ ಮೊರೊಕ್ಕೊ ಈ ಸಾಧನೆ ಮಾಡಿದ ಮೊದಲ ಆಫ್ರಿಕನ್ ಹಾಗೂ ಅರಬ್ ತಂಡವೆಂಬ ಹಿರಿಮೆಗೆ ಪಾತ್ರವಾಗಿದೆ.

ಡಿ.15ರಂದು ನಡೆಯಲಿರುವ ಸೆಮಿ ಫೈನಲ್‌ನಲ್ಲಿ ಚಾಂಪಿಯನ್ ಫ್ರಾನ್ಸ್ ಇಲ್ಲವೇ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.

ಅಲ್ ತುಮಾಮ ಸ್ಟೇಡಿಯಮ್‌ನಲ್ಲಿ ಶನಿವಾರ ನಡೆದ ವಿಶ್ವಕಪ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಮೊದಲ ಬಾರಿ ಕಾದಾಡಿದ ಮೊರೊಕ್ಕೊ ತನ್ನ ಕನಸಿನ ಓಟವನ್ನು ಮುಂದುವರಿಸಿತು. 42ನೇ ನಿಮಿಷದಲ್ಲಿ 1-0 ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಯಿತು.

ಯೂಸುಫ್ ಅನ್ನಸ್ರಿ ಅವರು 42ನೇ ನಿಮಿಷದಲ್ಲಿ ಪೋರ್ಚುಗಲ್‌ನ ಗೋಲ್‌ಕೀಪರ್ ಡಿಯೊಗೊ ಕೋಸ್ಟ ಹಾಗೂ ಡಿಫೆಂಡರ್ ರುಬೆನ್ ಡಿಯಾಸ್‌ಗಿಂತಲೂ ಎತ್ತರಕ್ಕೆ ಜಿಗಿದು ಹೆಡರ್‌ನ ಮೂಲಕ ಗೋಲು ಗಳಿಸಿದರು. ಇದಕ್ಕೂ ಮೊದಲು ಅವರು ಎರಡು ಬಾರಿ ಗೋಲು ಗಳಿಸಲು ವಿಫಲ ಯತ್ನ ನಡೆಸಿದ್ದರು.

   ಪೋರ್ಚುಗಲ್ ತಂಡ ಮೊರೊಕ್ಕೊದ ರಕ್ಷಣಾ ಕೋಟೆಯನ್ನು ಬೇಧಿಸಲು ಪರದಾಡಿತು. ಮೊರೊಕ್ಕೊ ಮುನ್ನಡೆ ಸಾಧಿಸಿದ ಸ್ವಲ್ಪ ಹೊತ್ತಿನಲ್ಲಿ ಬ್ರುನೊ ಫೆರ್ನಾಂಡಿಸ್ ಗೋಲು ಗಳಿಸುವ ಪ್ರಯತ್ನ ನಡೆಸಿದರು. ಮೊದಲಾರ್ಧದಲ್ಲಿ ಪಡೆದ ಮುನ್ನಡೆಯನ್ನು ಕೊನೆಯ ತನಕ ಉಳಿಸಿಕೊಂಡ ಮೊರೊಕ್ಕೊ ಸ್ಮರಣೀಯ ಗೆಲುವು ದಾಖಲಿಸಿದೆ.

ಇಂದಿನ ಪಂದ್ಯದಲ್ಲಿ ರೊನಾಲ್ಡೊ ಅವರು 51ನೇ ನಿಮಿಷದಲ್ಲಿ ಮೈದಾನಕ್ಕೆ ಇಳಿದರು. ಮೊರೊಕ್ಕೊ ಆಟಗಾರ ವಲೀದ್ ಅವರು ಹೆಚ್ಚುವರಿ ಸಮಯದಲ್ಲಿ ಸತತವಾಗಿ ಎರಡು ಹಳದಿ ಬಾರಿ ಕಾರ್ಡ್ ಸ್ವೀಕರಿಸಿದ್ದು, ಸೆಮಿ ಫೈನಲ್‌ನಿಂದ ವಂಚಿತವಾಗುವ ಸಾಧ್ಯತೆಯಿದೆ.

ಮೊತ್ತ ಮೊದಲ ಬಾರಿ ಸೆಮಿ ಫೈನಲ್ ತಲುಪಿರುವ ಮೊರೊಕ್ಕೊ ಇತರ ಮೂರು ಆಫ್ರಿಕಾ ದೇಶಗಳಾದ ಕ್ಯಾಮರೂನ್(1990), ಸೆನೆಗಲ್(2002) ಹಾಗೂ ಘಾನಾ(2010) ಸಾಧನೆಯನ್ನು ಮೀರಿ ನಿಂತಿತು. ಈ ಮೂರು ತಂಡಗಳು ವಿಶ್ವಕಪ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಮುಗ್ಗರಿಸಿದ್ದವು.
 

Similar News