×
Ad

ಫಿಫಾ ವಿಶ್ವಕಪ್ ಫೈನಲ್‍ಗೆ ಅರ್ಜೆಂಟೀನಾ: ಮೆಸ್ಸಿ, ಅಲ್ವರೆಝ್ ಅದ್ಭುತ ಪ್ರದರ್ಶನ

Update: 2022-12-14 07:23 IST

ಹೊಸದಿಲ್ಲಿ: ಫುಟ್ಬಾಲ್ ಮಾಂತ್ರಿಕ ಲಿಯೊನೆಲ್ ಮೆಸ್ಸಿ ಮತ್ತೆ ಅಭಿಮಾನಿಗಳನ್ನು ಮಂತ್ರಮುಗ್ಧಗೊಳಿಸಿದರು. ಮೆಸ್ಸಿ ಮತ್ತು ಅಲ್ವರೆಝ್ ಅವರ ಅದ್ಭುತ ಪ್ರದರ್ಶನದ ಮೂಲಕ ಕ್ರೊವೇಶಿಯಾ ಸವಾಲನ್ನು 3-0 ಗೋಲುಗಳಿಂದ ಬದಿಗೊತ್ತುವ ಮೂಲಕ ಅರ್ಜೆಂಟೀನಾ ತಂಡ  ಆರನೇ ಬಾರಿಗೆ ಫಿಫಾ ವಿಶ್ವಕಪ್ ಫೈನಲ್ ತಲುಪಿತು.

ಬುಧವಾರ ನಡೆದ ವಿಶ್ವಕಪ್‍ನ ಮೊದಲ ಸೆಮಿಫೈನಲ್‍ನಲ್ಲಿ ಮೆಸ್ಸಿ ಒಂದು ಗೋಲು ಹೊಡೆದ್ದು ಮಾತ್ರವಲ್ಲದೇ ಮತ್ತೊಂದು ಗೋಲು ಗಳಿಸಲು ಅದ್ಭುತ ನೆರವು ನೀಡುವ ಮೂಲಕ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದರು.

ಲುಸೈಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಜ್ಯೂಲಿಯನ್ ಅಲ್ವೆರೆಝ್ ಎರಡು ಗೋಲುಗಳನ್ನು ಗಳಿಸಿ ಎರಡು ಬಾರಿಯ ಚಾಂಪಿಯನ್ ತಂಡ ಫೈನಲ್ ತಲುಪಲು ನೆರವಾದರು.

ವಿರಾಮದ ವೇಳೆಗೆ 2-0 ಮುನ್ನಡೆ ಗಳಿಸಿದ ಅರ್ಜೆಂಟೀನಾ, 2018ರ ಫೈನಲಿಸ್ಟ್ ಕ್ರೊವೇಶಿಯಾ ತಂಡವನ್ನು ಚೇತರಿಸಿಕೊಳ್ಳಲು ಅವಕಾಶವನ್ನೇ ನೀಡಲಿಲ್ಲ. 34ನೇ ನಿಮಿಷದಲ್ಲಿ ಈ ಟೂರ್ನಿಯ ಐದನೇ ಗೋಲು ಗಳಿಸುವ ಮೂಲಕ ಮೆಸ್ಸಿ ಅರ್ಜೆಂಟೀನಾ ಗೋಲಿನ ಖಾತೆ ತೆರೆದರು.

39ನೇ ನಿಮಿಷದಲ್ಲಿ ಅದ್ಭುತ ಗೋಲಿನ ಮೂಲಕ ಅಲ್ವರೆಝ್ ಐದೇ ನಿಮಿಷದಲ್ಲಿ ಮುನ್ನಡೆಯನ್ನು ಹಿಗ್ಗಿಸಿದರು. 69ನೇ ನಿಮಿಷದಲ್ಲಿ ಅಲ್ವೆರೆಝ್ ಮತ್ತೊಂದು ಗೋಲು ಗಳಿಸುವ ಮೂಲಕ ಕ್ರೊವೇಶಿಯಾದ ಪಾಲಿಗೆ ವಿಶ್ವಕಪ್ ಅಭಿಯಾನ ಕೊನೆಗೊಳ್ಳಲು ಕಾರಣರಾದರು. ಗೋಲಿಗೆ ಅವಕಾಶ ಕಲ್ಪಿಸುವ ಮೂಲಕ ಮೆಸ್ಸಿ ತಂಡದ ಸುಲಭ ಜಯಕ್ಕೆ ನೆರವಾದರು.

ಗುರುವಾರ ನಡೆಯುವ ಫ್ರಾನ್ಸ್ ಮತ್ತು ಮೊರಾಕ್ಕೊ ನಡುವಿನ ಸೆಮಿಫೈನಲ್‍ನಲ್ಲಿ ಗೆಲ್ಲುವ ತಂಡವನ್ನು ರವಿವಾರ ನಡೆಯುವ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ಎದುರಿಸಲಿದೆ.

Similar News