ವಿಶ್ವಕಪ್ ಫೈನಲ್ ಲಿಯೊನೆಲ್ ಮೆಸ್ಸಿ ಆಡಲಿರುವ ಕೊನೆಯ ಪಂದ್ಯ: ವರದಿ

Update: 2022-12-14 13:49 GMT

ದೋಹಾ: 2022 ರ ಫಿಫಾ ವಿಶ್ವಕಪ್ ಫೈನಲ್ ಅರ್ಜೆಂಟೀನದ ಪರ ತಾನಾಡಲಿರುವ ಕೊನೆಯ ಪಂದ್ಯ. ಆ ನಂತರ ತಾನು ನಿವೃತ್ತಿಯಾಗಲಿದ್ದೇನೆ  ಎಂದು ಖ್ಯಾತ ಫುಟ್ಬಾಲ್ ಆಟಗಾರ  ಲಿಯೊನೆಲ್ ಮೆಸ್ಸಿ Lionel Messi  ದೃಢಪಡಿಸಿದ್ದಾರೆ ಎಂದು ವರದಿಯಾಗಿದೆ.

ಬುಧವಾರ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಅರ್ಜೆಂಟೀನ 3-0 ಗೋಲುಗಳಿಂದ ಕ್ರೊಯೇಶಿಯಾವನ್ನು ಸೋಲಿಸುವ ಮೂಲಕ ಫೈನಲ್ ಗೆ ಲಗ್ಗೆ ಇಟ್ಟಿದ್ದು,  ಮೆಸ್ಸಿ 34ನೇ ನಿಮಿಷದಲ್ಲಿ  ಪೆನಾಲ್ಟಿ  ಸ್ಪಾಟ್‌ನಿಂದ ಒಂದು ಗೋಲು ಗಳಿಸಿದ್ದರು. ಮತ್ತೊಂದು ಗೋಲು ಗಳಿಸಲು ನೆರವು ನೀಡಿದ್ದರು

 ಮೆಸ್ಸಿ  ವಿಶ್ವಕಪ್‌ಗಳಲ್ಲಿ ಅರ್ಜೆಂಟೀನದ ಪ್ರಮುಖ ಗೋಲ್‌ಸ್ಕೋರರ್ ಆಗಿ ಹೊರಹೊಮ್ಮಿದ್ದಾರೆ, ಪಟ್ಟಿಯಲ್ಲಿ ಗೇಬ್ರಿಯಲ್ ಬಟಿಸ್ಟುಟಾ (10) ಅವರನ್ನು ಹಿಂದಿಕ್ಕಿದ್ದಾರೆ. 35ರ ಹರೆಯದ ಮೆಸ್ಸಿ ಅವರು ಇಲ್ಲಿಯವರೆಗೆ 11 ವಿಶ್ವಕಪ್ ಗೋಲುಗಳನ್ನು ಗಳಿಸಿದ್ದಾರೆ.

ಮೆಸ್ಸಿ ಅವರು ಈಗ 2022 ರ ಆವೃತ್ತಿಯಲ್ಲಿ ಐದು ಗೋಲುಗಳನ್ನು ಗಳಿಸಿದ್ದಾರೆ. 'ಗೋಲ್ಡನ್ ಬೂಟ್‌'ಗಾಗಿ ನಡೆಯುತ್ತಿರುವ ಸ್ಪರ್ಧೆಯಲ್ಲಿ  ಫ್ರೆಂಚ್‌ನ ಕೈಲಿಯನ್ ಎಂಬಾಪೆ ಅವರೊಂದಿಗೆ ಪೈಪೋಟಿಯಲ್ಲಿದ್ದಾರೆ. ಎಂಬಾಪೆ ಕೂಡ 5 ಗೋಲು ಗಳಿಸಿದ್ದಾರೆ. , ನಿರ್ದಿಷ್ಟ ವಿಶ್ವಕಪ್ ಪಂದ್ಯಾವಳಿಯಲ್ಲಿ  ಅತಿ ಹೆಚ್ಚು ಗೋಲು ಗಳಿಸಿದವರಿಗೆ  'ಗೋಲ್ಡನ್ ಬೂಟ್' ನೀಡಲಾಗುತ್ತದೆ.

“ಫೈನಲ್ ನಲ್ಲಿ ನನ್ನ ಕೊನೆಯ ಪಂದ್ಯ ಆಡುವ ಮೂಲಕ ನನ್ನ ವಿಶ್ವಕಪ್ ಪಯಣವನ್ನು ಮುಗಿಸುತ್ತಿರುವುದು ಅತ್ಯಂತ ಸಂತೋಷದ ವಿಚಾರವಾಗಿದೆ. ಈ ಸಾಧನೆ ನನಗೆ ಖುಷಿ ತಂದಿದೆ. ಹಲವು ವರ್ಷಗಳ ಬಳಿಕ ಮುಂದಿನ ವಿಶ್ವಕಪ್ ನಡೆಯುತ್ತದೆ. ಅಲ್ಲಿ ಇಂತಹ ಸಾಧನೆ ಮಾಡಲಾಗುತ್ತದೆ ಎಂದು ನನಗೆ ಅನಿಸುತ್ತಿಲ್ಲ. ಈ ರೀತಿ ವಿದಾಯ ಹೇಳುವುದು ಅತ್ಯುತ್ತಮ ಎನಿಸುತ್ತದೆ’’ ಎಂದು ಮೆಸ್ಸಿ ಅರ್ಜೆಂಟೀನದ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಕ್ರೊಯೇಶಿಯ  ವಿರುದ್ಧದ ಸೆಮಿ-ಫೈನಲ್ ವಿಜಯದ ನಂತರ  ಮೆಸ್ಸಿ ತನ್ನ ಸಹ ಆಟಗಾರರಿಗೆ ಈ ಸಂದರ್ಭವನ್ನು "ಆನಂದಿಸುವಂತೆ" ಕೇಳಿಕೊಂಡರು.

"ಅರ್ಜೆಂಟೀನ ಮತ್ತೊಮ್ಮೆ ವಿಶ್ವಕಪ್ ಫೈನಲ್‌ನಲ್ಲಿದೆ. ಅದನ್ನು ಆನಂದಿಸಿ!" ಎಂದು ಮೆಸ್ಸಿ ಹೇಳಿದರು.

"ನಾವು ಉತ್ತಮವಾದುದರ ಜೊತೆಗೆ ಕಠಿಣ ಪರಿಸ್ಥಿತಿಗಳನ್ನು ಎದುರಿಸಿದ್ದೇವೆ. ಇಂದು ನಾವು ಅದ್ಭುತವಾದದ್ದನ್ನು ಅನುಭವಿಸುತ್ತಿದ್ದೇವೆ’’ ಎಂದು  ಮೆಸ್ಸಿ ಹೇಳಿದರು.

Similar News