ಮಾಸ್ಕೋದಲ್ಲಿ ವ್ಯಾಪಕ ಶೀತಜ್ವರ: ‘ಬಂಕರ್’ಗೆ ತೆರಳಿದ ರಶ್ಯ ಅಧ್ಯಕ್ಷ ಪುಟಿನ್
ಮಾಸ್ಕೋ, ಡಿ.14: ರಶ್ಯ ರಾಜಧಾನಿ ಮಾಸ್ಕೋದಲ್ಲಿ ಶೀತಜ್ವರ ಉಲ್ಬಣಗೊಂಡಿದ್ದು ಅಧ್ಯಕ್ಷರ ನಿಕಟವರ್ತಿಗಳು ಹಾಗೂ ಅಧ್ಯಕ್ಷರ ಕಚೇರಿಯ ಹಲವರು ಈ ಸೋಂಕುರೋಗದಿಂದ ಬಾಧಿತರಾಗಿರುವ ಹಿನ್ನೆಲೆಯಲ್ಲಿ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ‘ಬಂಕರ್’ನಲ್ಲಿರುವ ಪ್ರತ್ಯೇಕ ವ್ಯವಸ್ಥೆಗೆ ವಾಸಸ್ಥಳವನ್ನು ಬದಲಾಯಿಸಿದ್ದಾರೆ ಎಂದು ಉನ್ನತ ಮೂಲಗಳು ಹೇಳಿವೆ.
ಆರೋಗ್ಯದ ಸಮಸ್ಯೆ ಹಾಗೂ ಭದ್ರತಾ ಕಾರಣಗಳಿಂದಾಗಿ ಪುಟಿನ್ ಈ ಬಾರಿಯ ಹೊಸ ವರ್ಷಾಚರಣೆಯಿಂದ ದೂರ ಇರುವ ಸಾಧ್ಯತೆಯಿದೆ. ಈ ಮಾಸಾಂತ್ಯದಲ್ಲಿ ನಡೆಯಲಿರುವ ವಾರ್ಷಿಕ ಪತ್ರಿಕಾಗೋಷ್ಟಿಯನ್ನು ಈಗಾಗಲೇ ರದ್ದುಪಡಿಸಿದ್ದಾರೆ. ಜೊತೆಗೆ, ಈ ತಿಂಗಳು ಸಂಸತ್ತನ್ನು ಉದ್ದೇಶಿಸಿ ಮಾಡಲಿರುವ ಭಾಷಣವೂ ರದ್ದಾಗುವ ಸಾಧ್ಯತೆಯಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ದಿ ಮಿರರ್’ ವರದಿ ಮಾಡಿದೆ.
ರಶ್ಯ ಅಧ್ಯಕ್ಷರ ವಕ್ತಾರ ಡಿಮಿಟ್ರಿ ಪೆಸ್ಕೋವ್ ಸಹಿತ ಹಲವು ಪ್ರಮುಖ ಅಧಿಕಾರಿಗಳು ಸೋಂಕು ರೋಗದಿಂದ ಬಳಲುತ್ತಿದ್ದು ಸಂಸತ್ತಿನ ಮೇಲ್ಮನೆಯನ್ನುದ್ದೇಶಿಸಿ ಮಾಡಲಿರುವ ಭಾಷಣವನ್ನು ಪುಟಿನ್ ರದ್ದುಗೊಳಿಸುವ ಸಾಧ್ಯತೆ ಹೆಚ್ಚಿದೆ. ಇತ್ತೀಚಿನ ದಿನಗಳಲ್ಲಿ ಪುಟಿನ್ ಅವರು ಬಂಕರ್ ರೀತಿಯ ಮನೆಯಲ್ಲೇ ಹೆಚ್ಚಾಗಿ ವಾಸಿಸುತ್ತಿದ್ದಾರೆ. ಅಲ್ಲದೆ, ಉರಾಲ್ ಪರ್ವತದ ಹಿಂಬದಿಯಲ್ಲಿರುವ ಬಂಕರ್‌ನಲ್ಲಿ ತಮ್ಮ ಕುಟುಂಬವರ್ಗದೊಂದಿಗೆ ಪುಟಿನ್ ಈ ಬಾರಿಯ ಹೊಸ ವರ್ಷಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಯುರೋಪ್‌ನ ಸುದ್ಧಿಸಂಸ್ಥೆ ‘ನೊವಾಯ ಗಝೆಟ’ ವರದಿ ಮಾಡಿದೆ.