ಪಾಕಿಸ್ತಾನ: ಪೊಲೀಸ್ ಠಾಣೆಯ ಮೇಲೆ ಉಗ್ರರ ದಾಳಿ; 4 ಸಿಬಂದಿ ಮೃತ್ಯು

Update: 2022-12-18 16:36 GMT

ಇಸ್ಲಮಾಬಾದ್, ಡಿ.18: ವಾಯವ್ಯ ಪಾಕಿಸ್ತಾನದ ಸಂಘರ್ಷ ಪೀಡಿತ ಖೈಬರ್ ಪಖ್ತೂಂಕ್ವಾ ಪ್ರಾಂತದಲ್ಲಿ ಇತ್ತೀಚೆಗಷ್ಟೇ ಉದ್ಘಾಟನೆಗೊಂಡಿದ್ದ ಪೊಲೀಸ್ ಠಾಣೆಯ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಕನಿಷ್ಟ 4 ಪೊಲೀಸರು ಮೃತಪಟ್ಟಿದ್ದು ಇತರ ನಾಲ್ವರು ಗಾಯಗೊಂಡಿರುವುದಾಗಿ ವರದಿಯಾಗಿದೆ.

ದಕ್ಷಿಣ ವಝೀರಿಸ್ತಾನದ ಗಡಿಯಲ್ಲಿರುವ ಲಾಕಿ ಮಾರ್ವತ್ ನಗರದ ಪೊಲೀಸ್ ಠಾಣೆಯ ಮೇಲೆ ಹ್ಯಾಂಡ್‌ಗ್ರೆನೇಡ್ ಹಾಗೂ ರಾಕೆಟ್ ಲಾಂಚರ್ ಬಳಸಿ ದಾಳಿ ನಡೆಸಲಾಗಿದೆ. ಪೊಲೀಸರು ಪ್ರತಿದಾಳಿ ನಡೆಸಿದಾಗ ಶಂಕಿತ ಭಯೋತ್ಪಾದಕರು ಸ್ಥಳದಿಂದ ಪಲಾಯನ ಮಾಡಿದ್ದಾರೆ. ಸ್ಥಳಕ್ಕೆ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದ್ದು ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಇದೊಂದು ಹೇಡಿತನದ ಕೃತ್ಯ ಎಂದು ಖಂಡಿಸಿರುವ ಖೈಬರ್ ಪಖ್ತೂಂಕ್ವಾ ಪ್ರಾಂತದ ಮುಖ್ಯಮಂತ್ರಿ ಮೆಹ್ಮೂದ್ ಖಾನ್, ಈ ಬಗ್ಗೆ ತಕ್ಷಣ ತನಿಖೆ ಆರಂಭಿಸುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದ್ದಾರೆ. ಮೃತ ಹಾಗೂ ಗಾಯಗೊಂಡ ಪೊಲೀಸರ ಕುಟುಂಬಗಳಿಗೆ ಸಂತಾಪ ಸೂಚಿಸಿರುವ ಅಧ್ಯಕ್ಷ ಆರಿಫ್ ಆಲ್ವಿ, ಭಯೋತ್ಪಾದನೆಯ ಅವಶೇಷಗಳನ್ನು ಸಂಪೂರ್ಣ ತೊಡೆದು ಹಾಕುವ ಪ್ರಯತ್ನ ಮುಂದುವರಿಯಲಿದೆ ಎಂದಿದ್ದಾರೆ.

Similar News