ಚೀನಾದಲ್ಲಿ ಒಂದೇ ದಿನ 37 ದಶಲಕ್ಷ ಜನರಿಗೆ ಕೋವಿಡ್ ಸೋಂಕು: ವರದಿ

Update: 2022-12-23 17:19 GMT

ಬೀಜಿಂಗ್, ಡಿ.23: ಚೀನಾದಲ್ಲಿ ಈ ವಾರದ ಒಂದೇ ದಿನದಲ್ಲಿ ಸುಮಾರು 37 ದಶಲಕ್ಷ ಜನತೆ ಕೋವಿಡ್ ಸೋಂಕು ಬಾಧಿತರಾಗಿರುವರ ಸಾಧ್ಯತೆ ಇದೆಯೆಂದು ಅಂದಾಜಿಸಲಾಗಿದ್ದು ಇದು ಹೊಸ ದಾಖಲೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದರೊಂದಿಗೆ, ಚೀನಾದ ಜನಸಂಖ್ಯೆಯ ಸುಮಾರು 18%ದಷ್ಟು ಅಂದರೆ 248 ದಶಲಕ್ಷ ಜನತೆ ಈ ಡಿಸೆಂಬರ್ ತಿಂಗಳ ಆರಂಭದ 20 ದಿನದಲ್ಲೇ ಸೋಂಕು ಪೀಡಿತರಾಗಿರುವ ಸಾಧ್ಯತೆಯಿದೆ.

ಈ ಹಿಂದೆ 2022ರ ಜನವರಿ 19ರಂದು ಜಾಗತಿಕ ಕೋವಿಡ್ ಸೋಂಕಿನ ಪ್ರಕರಣ 4 ದಶಲಕ್ಷದ ಗಡಿ ತಲುಪಿದ್ದು ಇದುವರೆಗಿನ ದಾಖಲೆಯಾಗಿತ್ತು ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗದ ಸಭೆಯ ವರದಿಯನ್ನು ಉಲ್ಲೇಖಿಸಿ ಬ್ಲೂಮ್ಬರ್ಗ್ ವರದಿ ಮಾಡಿದೆ. ನೈಋತ್ಯದ ಸಿಚುವಾನ್ ಪ್ರಾಂತ ಮತ್ತು ರಾಜಧಾನಿ ಬೀಜಿಂಗ್ನ ಜನಸಂಖ್ಯೆಯ 50%ಕ್ಕೂ ಅಧಿಕ ಮಂದಿ ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಮಧ್ಯೆ, ಚೀನಾದಲ್ಲಿ ಏಕಾಏಕಿ ಉಲ್ಬಣಿಸಿರುವ ಕೋವಿಡ್-19 ಸೋಂಕು ತೀವ್ರಗತಿಯಲ್ಲಿ ನಗರ ಕೇಂದ್ರಗಳಿಂದ ಗ್ರಾಮೀಣ ಪ್ರದೇಶಕ್ಕೆ ಹರಡುತ್ತಿರುವುದರಿಂದ ಸೋಂಕು ನಿಯಂತ್ರಣಕ್ಕೆ ಅಗತ್ಯ ಕ್ರಮವನ್ನು ಕೈಗೊಳ್ಳುವಂತೆ ರಾಷ್ಟ್ರೀಯ ಆರೋಗ್ಯ ಆಯೋಗದ ಅಧ್ಯಕ್ಷ ಮಾ ಕ್ಸಿಯಾವೆಯ್ ಸೂಚಿಸಿದ್ದಾರೆ.

Similar News