ಬ್ರಿಟನ್ ಪಾಸ್ಪೋರ್ಟ್ ನಿರ್ವಹಣಾ ಸಿಬ್ಬಂದಿ ಮುಷ್ಕರ; ವಿಮಾನಸೇವೆ ವ್ಯತ್ಯಯ

Update: 2022-12-23 17:29 GMT

ಲಂಡನ್, ಡಿ.23; ಬ್ರಿಟನ್(Britain) ನಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಸಾರ್ವತ್ರಿಕ ಮುಷ್ಕರದ ಪ್ರಥಮ ದಿನವಾದ ಶುಕ್ರವಾರ ಪಾಸ್ಪೋರ್ಟ್(Passport) ನಿರ್ವಹಣಾ ಕೇಂದ್ರದ ಸಿಬಂದಿ ಮುಷ್ಕರಕ್ಕೆ ಕೈಜೋಡಿಸಿದ್ದರಿಂದ ವಿಮಾನ ಪ್ರಯಾಣಿಕರಿಗೆ ತೊಂದರೆಯಾಗಿದೆ. ಕಾರ್ಮಿಕರ ಮುಷ್ಕರ ಡಿಸೆಂಬರ್ 31ರವರೆಗೆ ನಡೆಯಲಿದೆ.

ಮುಷ್ಕರದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣ ಮತ್ತು ಬಂದರುಗಳಲ್ಲಿನ ಪಾಸ್ಪೋರ್ಟ್ ನಿಯಂತ್ರಣಾ ಕಚೇರಿಯಲ್ಲಿ ಬ್ರಿಟನ್ ಸರಕಾರ ಗಡಿ ಭದ್ರತಾ ಪಡೆಯ ಸಾವಿರಕ್ಕೂ ಅಧಿಕ ಸಿಬಂದಿಯನ್ನು ನಿಯೋಜಿಸಿತ್ತು. ಆದರೆ ಇವರೂ ಮುಷ್ಕರಕ್ಕೆ ಇಳಿಯುವ ನಿರೀಕ್ಷೆಯಿದೆ ಎಂದು ಸಾರ್ವಜನಿಕ ಮತ್ತು ವಾಣಿಜ್ಯ ಸೇವಾ ಒಕ್ಕೂಟ ತಿಳಿಸಿದೆ.

 ಗಡಿ ಭದ್ರತಾ ಪಡೆಯ ಸಿಬಂದಿಗೆ 2%ದಷ್ಟು ವೇತನ ಹೆಚ್ಚಳವನ್ನು ಪ್ರಸ್ತಾವಿಸಲಾಗಿದ್ದು ಆದರೆ 10.7 %ದಷ್ಟಿರುವ ಹಣದುಬ್ಬರಕ್ಕೆ ಹೋಲಿಸಿದರೆ ಇದು ತೀರಾ ಕನಿಷ್ಟವಾಗಿದೆ. ಸಿಬಂದಿಯ ಮುಷ್ಕರದಿಂದ ವಿಮಾನ ಪ್ರಯಾಣಿಕರಿಗೆ ಸಮಸ್ಯೆಯಾದರೆ ಕ್ಷಮೆ ಯಾಚಿಸುತ್ತೇವೆ ಎಂದು ಒಕ್ಕೂಟ ಹೇಳಿದೆ.  ನರ್ಸ್ ಗಳು, ಅರೆವೈದ್ಯಕೀಯ ಸಿಬಂದಿ, ರೈಲು ಮತ್ತು ಅಂಚೆ ವಲಯದ ಸಿಬಂದಿಗಳು ವೇತನ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಷ್ಕರ ನಡೆಸುತ್ತಿದ್ದಾರೆ.

ಡಿಸೆಂಬರ್ 27ನ್ನು ಹೊರತುಪಡಿಸಿ ಡಿಸೆಂಬರ್ 31ರವರೆಗೆ ನಡೆಯಲಿರುವ ಮುಷ್ಕರದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣಗಳಲ್ಲಿ ಮತ್ತು ಬಂದರುಗಳಲ್ಲಿ ಪಾಸ್ಪೋರ್ಟ್ ನಿರ್ವಹಣೆಗೆ ಸಹಾಯ ಮಾಡಲು ಸಶಸ್ತ್ರ ಪಡೆಗಳ ಸಿಬಂದಿ ಮತ್ತು ಸರಕಾರಿ ಅಧಿಕಾರಿಗಳಿಗೆ ತರಬೇತಿ ನೀಡುವುದಾಗಿ ಸರಕಾರ ಹೇಳಿದೆ. 

Similar News