ಅಮೆರಿಕಕ್ಕೆ ಅಪ್ಪಳಿಸಿದ ಚಳಿ ಬಿರುಗಾಳಿ: ಬಾಂಬ್ ಚಂಡಮಾರುತದ ಎಚ್ಚರಿಕೆ
ವಾಷಿಂಗ್ಟನ್, ಡಿ.23: ಅಮೆರಿಕ(America)ಕ್ಕೆ ಗುರುವಾರ ಅಪ್ಪಳಿಸಿದ ಚಳಿ ಬಿರುಗಾಳಿಯಿಂದ ತಾಪಮಾನ ಮೈನಸ್ 40 ಡಿಗ್ರಿ ಸೆಲ್ಶಿಯಸ್ ಗೆ ಇಳಿದಿದ್ದು ಇದು ಮುಂದಿನ ದಿನಗಳಲ್ಲಿ ‘ಬಾಂಬ್ ಚಂಡಮಾರುತ’(Bomb storm)ವಾಗಿ ರೂಪುಗೊಳ್ಳುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಡಿಸೆಂಬರ್ ಅಂತ್ಯದಲ್ಲಿ ಸಂಭವಿಸಿರುವ ಈ ವಿದ್ಯಮಾನವು ಕ್ರಿಸ್ಮಸ್ ಮತ್ತು ಹೊಸ ವರ್ಷದ ಸಂಭ್ರಮಾಚರಣೆಗೆ ಅಡ್ಡಿಯಾಗುವ ಸಾಧ್ಯತೆಯಿದೆ.
ತೀವ್ರ ಚಳಿಯಿಂದಾಗಿ ಗುರುವಾರ ಮತ್ತು ಶುಕ್ರವಾರ 5 ಸಾವಿರಕ್ಕೂ ಅಧಿಕ ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಚಳಿ ಬಿರುಗಾಳಿಯಿಂದಾಗಿ ಪ್ರತೀ ಗಂಟೆಗೆ ಅರ್ಧ ಇಂಚಿನಷ್ಟು ಹಿಮಪಾತ ಆಗಬಹುದು ಮತ್ತು ಗೋಚರತೆ ತೀವ್ರವಾಗಿ ಕಡಿಮೆಯಾಗಬಹುದು ಎಂದು ರಾಷ್ಟ್ರೀಯ ಹವಾಮಾನ ಇಲಾಖೆ ಹೇಳಿದೆ. ಕೆಂಟುಕಿ ಪ್ರಾಂತದ ಲೂಯಿಸ್ವಿಲೆ ನಗರದ ‘ಬಿಗ್ ಫೋರ್’ (The Big Four )ಸೇತುವೆಯಲ್ಲಿ ದಟ್ಟ ಮಂಜು ಮುಸುಕಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ರಸ್ತೆಗಳು ಹಾಗೂ ರಸ್ತೆ ಪಕ್ಕ ನಿಲ್ಲಿಸಿರುವ ವಾಹನಗಳು ಮಂಜಿನಲ್ಲಿ ಮುಚ್ಚಿಹೋಗಿರುವ ವೀಡಿಯೊವನ್ನು ಕೆಲ ವರು ಟ್ವೀಟ್ ಮಾಡಿದ್ದಾರೆ. ವಾಷಿಂಗ್ಟನ್ನಿಂದ ಫ್ಲೋರಿಡಾದವರೆಗೆ ಹಲವು ರಾಜ್ಯಗಳಿಗೆ(ಅಮೆರಿಕದ ಜನಸಂಖ್ಯೆಯ 60%ದಷ್ಟು ಅಥವಾ 200 ದಶಲಕ್ಷ ಜನರಿಗೆ) ತೀವ್ರ ಚಳಿ ಚಂಡಮಾರುತ, ಹಿಮಪಾತ, ಹಾಗೂ ಚಳಿಗಾಲದ ಹವಾಮಾನಕ್ಕೆ ಸಂಬಂಧಿಸಿದ ಇತರ ಎಚ್ಚರಿಕೆ ನೀಡಲಾಗಿದೆ.
ಹವಾಮಾನ ಕಚೇರಿಯ ಪ್ರಕಾರ, ಪ್ರಸ್ತುತ ಚಂಡಮಾರುತವು ಬಲವಾದ ಗಾಳಿಯನ್ನು ಪ್ರಚೋದಿಸುತ್ತದೆ ಮತ್ತು ಶನಿವಾರದವರೆಗೆ ಮಾರಣಾಂತಿಕ ಚಳಿಗಾಳಿ ಮುಂದುವರಿಯಲಿದೆ. ಈ ಪರಿಸ್ಥಿತಿಯಲ್ಲಿ ಪ್ರಯಾಣಕ್ಕೆ ಯೋಜನೆ ಹಾಕಿಕೊಂಡವರು ಅತ್ಯಂತ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಲಾಗಿದೆ.
ಬಾಂಬ್ ಚಂಡಮಾರುತ
ಬಾಂಬ್ ಚಂಡಮಾರುತ ಎಂದರೆ ಅತೀ ವೇಗವಾಗಿ ತೀವ್ರಗೊಳ್ಳುವ ಚಂಡಮಾರುತ. ಭೂಮಿಯ ಮೇಲ್ಮೈ ಬಳಿ ಗಾಳಿಯು ವಾತಾವರಣದಲ್ಲಿ ತ್ವರಿತವಾಗಿ ಏರಿದಾಗ ಬಾಂಬ್ ಚಂಡಮಾರುತಗಳು ರೂಪುಗೊಳ್ಳುತ್ತವೆ. ಇದು ವಾಯುಮಂಡಲದ ಒತ್ತಡದಲ್ಲಿ ಹಠಾತ್ ಕುಸಿತವನ್ನು ಉಂಟು ಮಾಡುತ್ತದೆ.
ಗಾಳಿಯು ಏರುತ್ತಿದ್ದಂತೆ ಬಿರುಗಾಳಿಯು ಚಂಡ ಮಾರುತದ ತಳದಲ್ಲಿ ಸುತ್ತುತ್ತದೆ. ವಾಯುಭಾರವು ಕುಸಿಯುತ್ತಲೇ ಇರುತ್ತದೆ.