ರೈಲ್ವೆ ಗುಮಾಸ್ತನಾಗಿದ್ದ ಉಪೇಂದ್ರ ಯಾದವ್‌ಗೆ ಐಪಿಎಲ್ ಬಾಗಿಲು ತೆರೆದದ್ದು ಹೇಗೆ?
ಲಕ್ನೊ: ರೈಲ್ವೆ ಗುಮಾಸ್ತನಾಗಿರುವ ಉತ್ತರ ಪ್ರದೇಶ ತಂಡದ ವಿಕೆಟ್ ಕೀಪರ್ ಬ್ಯಾಟರ್ ಉಪೇಂದ್ರ ಯಾದವ್‌ಗೆ IPL ಬಾಗಿಲು ತೆರೆದಿದ್ದು ಅವರು ಚೊಚ್ಚಲ ಐಪಿಎಲ್ ಪಂದ್ಯ ಆಡುವ ಕಾತರದಲ್ಲಿದ್ದಾರೆ. ಈ ವಿಕೆಟ್ ಕೀಪರ್ ಬ್ಯಾಟರ್ 2020ರ ರಣಜಿ ಋತುವಿನಲ್ಲಿ ಬಿ ಗುಂಪಿನ ಪಂದ್ಯಾವಳಿಯಲ್ಲಿ ಮುಂಬೈ ತಂಡದ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಏಳನೆ, ಎಂಟನೆ ಮತ್ತು ಒಂಬತ್ತನೆ ಕ್ರಮಾಂಕದ ಆಟಗಾರರೊಂದಿಗಿನ ಜೊತೆಯಾಟದಲ್ಲಿ ಕೇವಲ 239 ಎಸೆತಗಳಲ್ಲಿ ದ್ವಿಶತಕ ಸಾಧನೆ ಮಾಡಿದ್ದರಿಂದಾಗಿ ಐಪಿಎಲ್ ಆಯ್ಕೆದಾರರ ಗಮನ ಸೆಳೆಯಲು ಸಾಧ್ಯವಾಗಿದೆ ಎಂದು ಕ್ರಿಕೆಟ್ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ ಎಂದು timesofindia ವರದಿ ಮಾಡಿದೆ.
ಈಶಾನ್ಯ ರೈಲ್ವೆಯ ಲಕ್ನೊ ವಿಭಾಗದ ಎಂಜಿನಿಯರಿಂಗ್ ಇಲಾಖೆಯಲ್ಲಿ ಕಿರಿಯ ಗುಮಾಸ್ತನಾಗಿರುವ ಉಪೇಂದ್ರ ಯಾದವ್, ತಮ್ಮ ದ್ವಿಶತಕ ಸಾಧನೆಯ ಕೇವಲ ಎರಡು ತಿಂಗಳ ಹಿಂದೆ ನವೆಂಬರ್ 2019ರಲ್ಲಿ ನಡೆದಿದ್ದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ-20 ಕ್ರಿಕೆಟ್ ಪಂದ್ಯಾವಳಿಯ ಬಿ ಗುಂಪಿನಲ್ಲಿ ತಮಿಳುನಾಡು ತಂಡದ ವಿರುದ್ಧ ಕೇವಲ 41 ಬಾಲ್‌ಗಳಲ್ಲಿ ನಾಲ್ಕು ಬೌಂಡರಿ, ಐದು ಸಿಕ್ಸರ್ ಹೊಂದಿದ್ದ 70 ರನ್ ಸಿಡಿಸಿದ್ದರು. ಅವರ ಈ ಭರ್ಜರಿ ಆಟದ ನೆರವಿನಿಂದ ಉತ್ತರ ಪ್ರದೇಶ ತಂಡವು ತಮಿಳುನಾಡು ತಂಡದ ವಿರುದ್ಧ ಐದು ವಿಕೆಟ್‌ಗಳ ಗೆಲುವು ಸಾಧಿಸಿತ್ತು.
ಈ ಸಾಧನೆಯನ್ನು ಪರಿಗಣಿಸಿ ಮುಂಬೈ ಇಂಡಿಯನ್ಸ್ IPL ಮಿನಿ ಹರಾಜಿನಲ್ಲಿ ಕಾನ್ಪುರ ಮೂಲದ 26 ವರ್ಷ ವಯಸ್ಸಿನ ಉಪೇಂದ್ರ ಯಾದವ್‌ರನ್ನು ರೂ. 20 ಲಕ್ಷಕ್ಕೆ ಖರೀದಿಸುವ ಬಿಡ್ ಮಾಡಿತು. ಆದರೆ, ಕೂಡಲೇ ರೂ. 25 ಲಕ್ಷಕ್ಕೆ ಬಿಡ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ತಂಡ, ಅವರನ್ನು ಖರೀದಿಸುವಲ್ಲಿ ಯಶಸ್ವಿಯಾಯಿತು.
ಉಪೇಂದ್ರ ಯಾದವ್ SRH ನ ಮೂರನೆ ವಿಕೆಟ್ ಕೀಪರ್ ಆಗಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ತಂಡವು ನ್ಯೂಝಿಲೆಂಡ್‌ನ ವಿಕೆಟ್ ಕೀಪರ್ ಗ್ಲೆನ್ ಫಿಲಿಪ್ಸ್‌ಗೆ ರೂ. 1.5 ಕೋಟಿ ತೆತ್ತು ತಂಡದಲ್ಲಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರೆ, ರೂ. 5.25 ಕೋಟಿ ತೆತ್ತು ದಕ್ಷಿಣ ಆಫ್ರಿಕಾ ವಿಕೆಟ್ ಕೀಪರ್ ಹೆನ್ರಿಕ್ ಕ್ಲಾಸನ್‌ರನ್ನು ಖರೀದಿಸಿದೆ.
ಈ ಕುರಿತು timesofindia ಸುದ್ದಿ ಸಂಸ್ಥೆಯೊಂದಿಗೆ ದೂರವಾಣಿ ಕರೆ ಮೂಲಕ ದಿಲ್ಲಿಯಿಂದ ಮಾತನಾಡಿರುವ ಉಪೇಂದ್ರ ಯಾದವ್, "ನಾವು ಪಂದ್ಯದ ನಂತರ ತಂಡದ ಸಭೆಯಲ್ಲಿ ಭಾಗಿಯಾಗಿದ್ದಾಗ ನನ್ನ ಸಹ ಆಟಗಾರನೊಬ್ಬ ನಾನು ಐಪಿಎಲ್ ಪಂದ್ಯಾವಳಿಗೆ ಆಯ್ಕೆಯಾಗಿರುವ ಕುರಿತು ತಿಳಿಸಿದ. ನಾನು ಸನ್‌ರೈಸರ್ಸ್ ಹೈದರಾಬಾದ್ ತಂಡದ ಭಾಗವಾಗಿರುವುದಕ್ಕೆ ಸಂತಸವಾಗಿದೆ" ಎಂದು ತಿಳಿಸಿದ್ದಾರೆ.
ಉತ್ತರ ಪ್ರದೇಶದ ನಿವೃತ್ತ ಸಬ್ ಇನ್ಸ್‌ಪೆಕ್ಟರ್ ದೇವನ್ ಸಿಂಗ್ ಅವರ ಪುತ್ರನಾದ ಉಪೇಂದ್ರ ಯಾದವ್, ತನ್ನ ಇಂದಿನ ಯಶಸ್ಸಿನ ಸಂಪೂರ್ಣ ಶ್ರೇಯ ನನ್ನ ಅಣ್ಣ ವರುಣ್ ಯಾದವ್ (31) ಅವರಿಗೆ ಸಲ್ಲಬೇಕು ಅನ್ನುತ್ತಾರೆ.