ಫಿಲಿಪ್ಪೀನ್ಸ್ ನಲ್ಲಿ ಪ್ರವಾಹ: 51 ಮಂದಿ ಮೃತ್ಯು; 19 ಮಂದಿ ನಾಪತ್ತೆ
ಮನಿಲ, ಜ.2: ಫಿಲಿಪ್ಪೀನ್ಸ್ ನ ಹಲವೆಡೆ ಕ್ರಿಸ್ಮಸ್ ವಾರಾಂತ್ಯದ ಸಂಭ್ರಮಕ್ಕೆ ತಣ್ಣೀರೆಚಿದ ಭೀಕರ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 51ಕ್ಕೇರಿದ್ದು ಇನ್ನೂ 19 ಮಂದಿ ನಾಪತ್ತೆಯಾಗಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಇಲಾಖೆ ಸೋಮವಾರ ಮಾಹಿತಿ ನೀಡಿದೆ.
ಮಿಸಾಮಿಯ ಓಕ್ಸಿಡೆಂಟಲ್ ಪ್ರಾಂತದ ನಾರ್ಥರ್ನ್ ಮಿಂಡನಾವೊ ಗ್ರಾಮ ಜಲಾವೃತಗೊಂಡಿದ್ದು ಹಲವು ಮನೆಗಳಿಗೆ ಕೆಸರು ಮಿಶ್ರಿತ ನೆರೆನೀರು ನುಗ್ಗಿದೆ. ಈ ಪ್ರದೇಶದಲ್ಲಿ ವ್ಯಾಪಕ ಭೂಕುಸಿತ ಸಂಭವಿಸಿದ್ದು ಇಲ್ಲಿ ಕನಿಷ್ಟ 25 ಮಂದಿ ಮೃತಪಟ್ಟಿದ್ದಾರೆ. ಮೀನುಗಾರರ ದೋಣಿ ಮಗುಚಿಬಿದ್ದು ಹಲವು ಮೀನುಗಾರರು ನಾಪತ್ತೆಯಾಗಿದ್ದಾರೆ. ಸಮುದ್ರ ತೀರದ ಕಬೋಲ್-ಅನೋನಮ್ ಗ್ರಾಮದಲ್ಲಿ ತೆಂಗಿನ ಮರಗಳು ಉರುಳಿ ಬಿದ್ದಿದ್ದು ಬಿದಿರಿನಿಂದ ನಿರ್ಮಿಸಿರುವ ಹಲವು ಮನೆಗಳಿಗೆ ಹಾನಿಯಾಗಿವೆ.
ಪ್ರವಾಹದಿಂದ ನಲುಗಿರುವ ಪೂರ್ವ, ಮಧ್ಯ ಮತ್ತು ದಕ್ಷಿಣ ಫಿಲಿಪ್ಪೀನ್ಸ್ ನಲ್ಲಿ ಈಗ ನೆರೆ ಇಳಿಮುಖವಾಗಿದ್ದರೂ ತಗ್ಗು ಪ್ರದೇಶಗಳು ಇನ್ನೂ ಜಲಾವೃತಗೊಂಡಿವೆ. ಪ್ರವಾಹದ ಕಾರಣದಿಂದ ಸ್ಥಳಾಂತರಗೊಂಡಿದ್ದ 6 ಲಕ್ಷ ಜನರಲ್ಲಿ 8,600 ಮಂದಿ ಈಗಲೂ ತಾತ್ಕಾಲಿಕ ಶಿಬಿರದಲ್ಲಿ ಆಶ್ರಯ ಪಡೆದಿದ್ದಾರೆ. ನೆರೆಯಿಂದ ರಸ್ತೆ, ಸೇತುವೆಯ ಜತೆ 4,500ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದ್ದು ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಮತ್ತು ನೀರು ಪೂರೈಕೆ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. 22 ನಗರಗಳು ಹಾಗೂ ಪುರಸಭೆ ವಿಪತ್ತು ಸ್ಥಿತಿ ಘೋಷಿಸಿವೆ. ಜಲಾವೃತಗೊಂಡಿರುವ ಪ್ರದೇಶದಲ್ಲಿ ಸಿಕ್ಕಿಬಿದ್ದಿರುವ ಜನರಿಗೆ ಆಹಾರ ಮತ್ತು ನೀರಿನ ಪ್ಯಾಕೆಟ್ ಒದಗಿಸಲಾಗಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.