200 ವರ್ಷಗಳ ನಂತರ ಪ್ರಥಮ ಬಾರಿಗೆ ಶ್ರೀ ವರದರಾಜ ಪೆರುಮಾಳ್ ದೇವಸ್ಥಾನವನ್ನು ಪ್ರವೇಶಿಸಿದ ದಲಿತರು

Update: 2023-01-03 11:00 GMT

ಕಲ್ಲುಕುರಿಚಿ (ತಮಿಳುನಾಡು): 200 ವರ್ಷಗಳ ಇತಿಹಾಸ ಹೊಂದಿರುವ, ಕಲ್ಲಕುರಿಚಿ ಜಿಲ್ಲೆಯ ಏಡುದವೈನಾಥಂ ಗ್ರಾಮದ ಪುರಾತನ ಶ್ರೀ ವರದರಾಜ ಪೆರುಮಾಳ್ ದೇವಾಲಯಕ್ಕೆ (Sri Varadharaja Perumal temple) ಸೋಮವಾರ ದಲಿತರು (Dalits) ಪೊಲೀಸರ ಭದ್ರತೆಯೊಂದಿಗೆ ಪ್ರವೇಶಿಸಿದ್ದಾರೆ. ಜಿಲ್ಲಾ ಕಂದಾಯ ಉಪ ವಿಭಾಗಾಧಿಕಾರಿ ಎಸ್. ಪವಿತ್ರ ಮಧ್ಯಸ್ಥಿಕೆ ವಹಿಸಿ, ಯಶಸ್ವಿ ಸಂಧಾನ ನಡೆಸಿದ ಬಳಿಕ ದಲಿತರು ದೇವಾಲಯ ಪ್ರವೇಶಿಸಿದ್ದಾರೆ ಎಂದು thehindu.com ವರದಿ ಮಾಡಿದೆ.

ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ಅಧೀನದಲ್ಲಿರುವ ಶ್ರೀ ವಾದಿರಾಜ ಪೆರುಮಾಳ್ ದೇವಾಲಯಕ್ಕೆ ಭಾರಿ ಪೊಲೀಸ್ ಭದ್ರತೆಯೊಂದಿಗೆ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ದಲಿತ ಸಮುದಾಯದ ಸದಸ್ಯರು ಹೂಮಾಲೆ, ಹಣ್ಣುಗಳ ಬುಟ್ಟಿಯನ್ನಿಡಿದು ದೇವಾಲಯ ಪ್ರವೇಶಿಸಿ, ಪ್ರಾರ್ಥನೆ ಸಲ್ಲಿಸಿದರು.

ದಲಿತ ಸಮುದಾಯದ ಯುವಕ ಪಿ. ರಮೇಶ್ ಕುಮಾರ್ ಪ್ರಕಾರ, "ದೇವಾಲಯವು 200 ವರ್ಷಗಳಷ್ಟು ಹಳೆಯದಾಗಿದ್ದು, ದೇವಾಲಯ ಪ್ರಾರಂಭವಾದಾಗಿನಿಂದ ದೇವಾಲಯ ಪ್ರವೇಶಕ್ಕೆ ದಲಿತರಿಗೆ ನಿಷೇಧ ಹೇರಲಾಗಿತ್ತು. ನಾವು ಗ್ರಾಮದ ಸವರ್ಣೀಯರಿಗೆ ದೇವಾಲಯದ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ತಮಗೂ ಅವಕಾಶ ನೀಡುವಂತೆ ಪದೇ ಪದೇ ಮನವಿ ಮಾಡಿದ್ದೆವು. ಆದರೆ, ಅದಕ್ಕೆ ನಿರಾಕರಿಸಿದ್ದ ಸವರ್ಣೀಯರು, 2008ರಿಂದ ದೇವಾಲಯ ಮೆರವಣಿಗೆಯನ್ನೂ ಅಮಾನತುಗೊಳಿಸಿದ್ದರು. ನಾವು ನಮ್ಮ ಜೀವನದಲ್ಲಿ ಇದೇ ಪ್ರಥಮ ಬಾರಿಗೆ ದೇವಾಲಯ ಪ್ರವೇಶಿಸುತ್ತಿದ್ದು, ನಮ್ಮ ಮನವಿಯನ್ನು ಅಂಗೀಕರಿಸಿದ ಜಿಲ್ಲಾಡಳಿತ ಮತ್ತು ಪೊಲೀಸರಿಗೆ ಧನ್ಯವಾದ ಅರ್ಪಿಸುತ್ತೇವೆ" ಎಂದು ತಿಳಿಸಿದ್ದಾರೆ.

ಅಧಿಕೃತ ಮೂಲಗಳ ಪ್ರಕಾರ, ದಲಿತರ ದೇವಾಲಯ ಪ್ರವೇಶಕ್ಕೆ ಗ್ರಾಮಸ್ಥರು ಅಲಿಖಿತ ನಿಷೇಧ ಹೇರಿದ್ದರು. ಈ ಕುರಿತು ಜಿಲ್ಲಾಡಳಿತಕ್ಕೆ ದೂರು ನೀಡಿದ್ದ ದಲಿತ ಸಮುದಾಯದವರು, ಮಧ್ಯಪ್ರವೇಶಿಸುವಂತೆ ಮನವಿ ಮಾಡಿದ್ದರು. ಇದರ ಬೆನ್ನಿಗೇ ಕಲ್ಲಕುರಿಚಿ ಜಿಲ್ಲಾ ಕಂದಾಯ ಉಪ ವಿಭಾಗಾಧಿಕಾರಿ ಎಸ್. ಪವಿತ್ರ ಅವರು ಡಿಸೆಂಬರ್ 27ರಂದು ಉಭಯ ಬಣಗಳ ನಡುವೆ ಗ್ರಾಮದಲ್ಲಿ ಶಾಂತಿ ಸಭೆ ನಡೆಸಿದ್ದರು. ಈ ಸಂದರ್ಭದಲ್ಲಿ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಲು ಬಯಸುವ ಯಾವುದೇ ವ್ಯಕ್ತಿಯನ್ನು ತಡೆಯುವ ಹಕ್ಕು ಯಾರಿಗೂ ಇಲ್ಲ ಎಂದು ಸವರ್ಣೀಯರಿಗೆ ಮನವರಿಕೆ ಮಾಡಿಕೊಡಲಾಗಿತ್ತು.

ಸೋಮವಾರ ನಡೆದ ದೇವಾಲಯದ ಮೆರವಣಿಗೆಯಲ್ಲಿ  ಒಂದು ಕಿಮೀ ದೂರ ನಡೆದ 250ಕ್ಕೂ ಹೆಚ್ಚು ದಲಿತರು, ಗ್ರಾಮದ ಇತಿಹಾಸದಲ್ಲೇ ಜೀವನದಲ್ಲಿ ಪ್ರಥಮ ಬಾರಿಗೆ ದೇವಾಲಯವನ್ನು ಪ್ರವೇಶಿಸಿದರು. ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ 300 ಮಂದಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು.

ಇದನ್ನೂ ಓದಿ: ನೋಟು ಅಮಾನ್ಯೀಕರಣಗೊಂಡ ಆರು ವರ್ಷಗಳ ನಂತರ ನಗದು ಚಲಾವಣೆ ದುಪ್ಪಟ್ಟು

Similar News