ಮಕ್ಕಾದಲ್ಲಿ ಹಿಮಪಾತವೆಂದು ಸಾಮಾಜಿಕ ತಾಣಗಳಲ್ಲಿ ಹರಡುತ್ತಿರುವ ವೀಡಿಯೋ ಅಸಲಿಯತ್ತೇನು?

Update: 2023-01-04 14:52 GMT

ಹೊಸದಿಲ್ಲಿ: ಸೌದಿ ಅರೇಬಿಯಾದ ನ್ಯಾಷನಲ್‌ ಸೆಂಟರ್‌ ಆಫ್‌ ಮಿಟಿಯರಾಲಜಿ ಜನವರಿ 1, 2023 ರಂದು ದೇಶದ ಉತ್ತರ ಭಾಗಗಳಲ್ಲಿ ಭಾರೀ ಹಿಮಪಾತ ಹಾಗೂ ಮಕ್ಕಾ-ಮದೀನಾ ಪ್ರಾಂತ್ಯದಲ್ಲಿ ಭಾರೀ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಕೆಲ ಸಾಮಾಜಿಕ ಜಾಲತಾಣ ಬಳಕೆದಾರರು ಮಕ್ಕಾದ ಮಸ್ಜಿದುಲ್ ಹರಾಂನ ವೀಡಿಯೋವೊಂದನ್ನು ಶೇರ್‌ ಮಾಡಿ ಮಕ್ಕಾದಲ್ಲಿ ಮೊತ್ತಮೊದಲ ಬಾರಿಗೆ ಭಾರೀ ಹಿಮಪಾತವಾಗಿದೆ ಎಂದು ಹೇಳಿಕೊಂಡಿದ್ದಾರೆ.

ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮಕ್ಕಾ ಶರೀಫ್‌ನಲ್ಲಿ ಜನವರಿ 1 ರಂದು ಹಿಮಪಾತವಾಗಿದೆ ಎಂದು ಸಾಮಾಜಿಕ ಜಾಲತಾಣಿಗರೊಬ್ಬರು ಬರೆದಿದ್ದಾರೆ.

ಇನ್ನೊಬ್ಬರು ಅದೇ ವೀಡಿಯೋ ಶೇರ್‌ ಮಾಡಿ ಮಕ್ಕಾದಲ್ಲಿ ಹಿಮಪಾತವಾಗುತ್ತಿದೆ ಎಂದು ಬರೆದಿದ್ದರು. ಈ ವೀಡಿಯೋವನ್ನು 68000ಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ಫೇಸ್ಬುಕ್‌ ಹಾಗೂ ಟ್ವಿಟ್ಟರ್‌ನಲ್ಲಿ ಈ ವೀಡಿಯೋ ವೈರಲ್‌ ಆಗಿದೆ. ಈ ಕುರಿತು ಫ್ಯಾಕ್ಟ್‌ ಚೆಕ್ಕಿಂಗ್‌ ವೆಬ್‌ಸೈಟ್‌ ಆಲ್ಟ್‌ ನ್ಯೂಸ್‌ ಪರಿಶೀಲನೆ ನಡೆಸಿದೆ. ಸ್ನೋಫಾಲ್‌ ಇನ್‌ ಮಕ್ಕಾ ಎಂದು ಬರೆದು ಗೂಗಲ್‌ನಲ್ಲಿ ಸರ್ಚ್‌ ಮಾಡಿದಾಗ  ಖಲೀಜ್‌ ಟೈಮ್ಸ್‌ನ ಆನ್‌ಲೈನ್‌ ಆವೃತ್ತಿ ಕಾಣಿಸಿಕೊಂಡಿದೆಯಲ್ಲದೆ ಈ ವೀಡಿಯೋ ನಕಲಿ ಮತ್ತು ತಿರುಚಲ್ಪಟ್ಟಿದೆ ಎಂದ ಅದರಲ್ಲಿ ವರದಿಯಾಗಿತ್ತು.

ಸೌದಿಯ ನ್ಯಾಷನಲ್‌ ಸೆಂಟರ್‌ ಆಫ್‌ ಮಿಟಿಯರಾಲಜಿ ಕೂಡ ಟ್ವೀಟ್‌ ಒಂದನ್ನು ಮಾಡಿ ವೀಡಿಯೋ ಸುಳ್ಳು ಮತ್ತು ತಿರುಚಲ್ಪಟ್ಟಿದೆ ಎಂದು ಹೇಳಿದೆ.

ಅರೇಬಿಯನ್‌ ವೆದರ್‌ ಎಸ್‌ಎ ಕೂಡ ಟ್ವೀಟ್‌ ಮಾಡಿ ವೀಡಿಯೋವನ್ನು ತಾಂತ್ರಿಕವಾಗಿ ಮಾರ್ಪಡಿಸಲಾಗಿದೆ ಹಾಗೂ ಈ ಕಾರ್ಯಕ್ಕೆ ಫಿಲ್ಟರ್‌ಗಳನ್ನು ಬಳಸಲಾಗಿದೆ ಎಂದು ಹೇಳಿದೆ.

ಜನವರಿ 1 ತಾರೀಕಿನ ಮೆಕ್ಕಾ ಹವಾಮಾನವನ್ನು  ಅಕ್ಯುವೆದರ್‌ ಕೂಡ ನೀಡಿದ್ದು ಆ ದಿನದ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್‌ ಆಗಿದ್ದರೆ ಕನಿಷ್ಠ 17 ಡಿಗ್ರಿಯಾಗಿತ್ತು ಎಂದು ಹೇಳಿದೆ. ಈ ತಾಪಮಾನದಲ್ಲಿ ಹಿಮಪಾತವಾಗುವುದು ಅಸಾಧ್ಯ.

ಹೀಗಿರುವಾಗ ಸಾಮಾಜಿಕ ಜಾಲತಾಣದಲ್ಲಿ ಮಕ್ಕಾದ್ದೆಂದು ಹರಿದಾಡುತ್ತಿರುವ ವೀಡಿಯೋ ನಕಲಿ ಎಂದು ಸ್ಪಷ್ಟವಾಗುತ್ತದೆ.

Similar News