2 ಪಂದ್ಯಗಳಿಂದ ನಿಷೇಧ ಹಿನ್ನೆಲೆ: ಅಲ್ ನಸ್ರ್ ಫುಟ್ಬಾಲ್ ಕ್ಲಬ್‌ ಪರ ರೊನಾಲ್ಡೊ ಪಾದಾರ್ಪಣೆ ಪಂದ್ಯ ಮುಂದೂಡಿಕೆ

Update: 2023-01-05 14:02 GMT

ದೋಹಾ:  ಪೋರ್ಚುಗಲ್ ನ ಸ್ಟಾರ್ ಆಟಗಾರ  ಕ್ರಿಸ್ಟಿಯಾನೊ ರೊನಾಲ್ಡೊ ಗುರುವಾರ ನಿಗದಿಯಾಗಿರುವಂತೆ ಸೌದಿ ಅರೇಬಿಯಾದ ಅಲ್ ನಸ್ರ್ ಫುಟ್ಬಾಲ್  ಕ್ಲಬ್‌ ಪರ ಪಾದಾರ್ಪಣೆ ಪಂದ್ಯವನ್ನು ಆಡಲು ಸಾಧ್ಯವಾಗುತ್ತಿಲ್ಲ. ಅನುಚಿತ ಹಾಗೂ ಹಿಂಸಾತ್ಮಕ ವರ್ತನೆಗೆ ಇಂಗ್ಲಿಷ್ ಫುಟ್ಬಾಲ್ ಅಸೋಸಿಯೇಶನ್ ನವೆಂಬರ್ ನಲ್ಲಿ 2 ಪಂದ್ಯಗಳಿಂದ ನಿಷೇಧ ವಿಧಿಸಿರುವುದು ಇದಕ್ಕೆ ಕಾರಣವಾಗಿದೆ.  

ಕ್ರಿಸ್ಟಿಯಾನೊ ರೊನಾಲ್ಡೊ ಅವರು ಸೌದಿ ಅರೇಬಿಯಾದಲ್ಲಿ ತಮ್ಮ ಹೊಸ ತಂಡವಾದ ಅಲ್ ನಸ್ರ್‌ಗೆ ಪಾದಾರ್ಪಣೆ  ಮಾಡಲು  ಜನವರಿ 21 ರವರೆಗೆ ಕಾಯಬೇಕಾಗುತ್ತದೆ.

ಕಳೆದ ಎಪ್ರಿಲ್‌ನಲ್ಲಿ ಎವರ್ಟನ್ ವಿರುದ್ಧ ಮ್ಯಾಂಚೆಸ್ಟರ್ ಯುನೈಟೆಡ್  0-1 ಗೋಲು ಅಂತರದಿಂದ  ಸೋತ ನಂತರ ಇಂಗ್ಲಿಷ್ ಫುಟ್ಬಾಲ್ ಅಸೋಸಿಯೇಶನ್  ರೊನಾಲ್ಡೊ  ವಿರುದ್ಧ ಶಿಸ್ತು ಕ್ರಮ ಕೈಗೊಂಡ ಕಾರಣ ಪೋರ್ಚುಗೀಸ್ ತಾರೆಯನ್ನು ಎರಡು ಪಂದ್ಯಗಳಿಗೆ ನಿಷೇಧಿಸಲಾಗಿತ್ತು.

37 ವರ್ಷ ವಯಸ್ಸಿನ ಫುಟ್ಬಾಲ್ ಆಟಗಾರ ರೊನಾಲ್ಡೊಗೆ  ನಿಷೇಧದ ಬಗ್ಗೆ ತಿಳಿಸಿದಾಗ, ಸೌದಿ ಪ್ರೊ ಲೀಗ್‌ನ ಶ್ರೀಸೂಲ್ ಪಾರ್ಕ್‌ನಲ್ಲಿ ತನ್ನ ಮೊದಲ ಪಂದ್ಯವನ್ನು ಆಡಲು ಸಿದ್ಧತೆ ನಡೆಸುತ್ತಿದ್ದರು.

ನವೆಂಬರ್‌ನಲ್ಲಿ, ರೊನಾಲ್ಡೊ ಇಂಗ್ಲಿಷ್ ಎಫ್ ಎ ನಿಂದ ಅನುಚಿತ ಹಾಗೂ  ಹಿಂಸಾತ್ಮಕ ನಡವಳಿಕೆಯಲ್ಲಿ ತಪ್ಪಿತಸ್ಥರೆಂದು ಕಂಡುಬಂದಿದ್ದರು.  ಪಂದ್ಯದ  ನಂತರ ಕೋಪದ ಭರದಲ್ಲಿ ಹದಿಹರೆಯದ ಅಭಿಮಾನಿಗಳ ಫೋನ್ ಅನ್ನು ಒಡೆದಿದ್ದಕ್ಕಾಗಿ ರೊನಾಲ್ಡೊ  ಎರಡು ಪಂದ್ಯಗಳಿಗೆ ಅಮಾನತುಗೊಳಿಸಲಾಯಿತು.

ರೊನಾಲ್ಡೊ ಪಂದ್ಯದ ನಂತರ ನಡೆದುಕೊಂಡು ಹೋಗುತ್ತಿದ್ದಾಗ ಕೋಪದಭರದಲ್ಲಿ ಹುಡುಗನ ಕೈಯಿಂದ ಫೋನ್  ಅನ್ನು ಕಸಿದುಕೊಂಡು ಅದನ್ನು ನೆಲಕ್ಕೆ ಎಸೆದು ಒಡೆದು ಹಾಕುತ್ತಿರುವುದು ವೀಡಿಯೊ ದೃಶ್ಯದಲ್ಲಿ  ಕಂಡುಬಂದಿದೆ.

ನಂತರ ರೊನಾಲ್ಡೊ ಅವರು ತಮ್ಮ "ವರ್ತನೆಗೆ’’ ಸಾಮಾಜಿಕ ಮಾಧ್ಯಮದ ಮೂಲಕ ಕ್ಷಮೆಯಾಚಿಸಿದ್ದರು ಮತ್ತು ಓಲ್ಡ್ ಟ್ರಾಫರ್ಡ್‌ನಲ್ಲಿ ಕ್ರೀಡಾ ಮನೋಭಾವದ ಸಂಕೇತವಾಗಿ" ತನ್ನ ಅತಿಥಿಯಾಗಿ ಬರುವಂತೆ ಅಭಿಮಾನಿಗೆ ಆಹ್ವಾನವನ್ನು ನೀಡಿದ್ದರು.

ರೊನಾಲ್ಡೊಗೆ ನಿಷೇಧದ ಜೊತೆಗೆ 50,000 ಪೌಂಡ್ ದಂಡವನ್ನು ವಿಧಿಸಲಾಯಿತು, ಆದರೆ ಯುನೈಟೆಡ್ ಜೊತೆಗಿನ ಅವರ ಒಪ್ಪಂದವನ್ನು ಕೊನೆಗೊಳಿಸಿದ್ದರಿಂದ ಅವರು ಅಮಾನತುಗೊಂಡಿರಲಿಲ್ಲ. ರೊನಾಲ್ಡೊ ಹೊಸ ಕ್ಲಬ್‌ಗೆ ಸೇರಿದಾಗಲೆಲ್ಲಾ ನಿಷೇಧವು ಅನ್ವಯಿಸುತ್ತದೆ.

ರೊನಾಲ್ಡೊ ಈಗ ಸೌದಿ ಪ್ರೊ ಲೀಗ್‌ನಲ್ಲಿ ಎರಡು ಪಂದ್ಯಗಳ ನಿಷೇಧವನ್ನು ಪೂರೈಸಬೇಕಾಗುತ್ತದೆ.  ಮುಂದಿನ ಎರಡು ಪಂದ್ಯಗಳಿಂದ ಹೊರಗುಳಿಯಬೇಕಾಗುತ್ತದೆ.

ಸೋಮವಾರ ರಿಯಾದ್‌ಗೆ ಬಂದಿಳಿದ ರೊನಾಲ್ಡೊ ವೈದ್ಯಕೀಯ ತಪಾಸಣೆಗೆ ಒಳಗಾಗಿದ್ದರು. ಅಲ್ ನಸ್ರ್ ಪರ ಭಾರೀ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿದ ನಂತರ  ತನ್ನ ಹೊಸ ತಂಡದ ಸದಸ್ಯರೊಂದಿಗೆ ಮುಕ್ತ ತರಬೇತಿಯಲ್ಲಿ ಭಾಗವಹಿಸಿದ್ದರು. ರೊನಾಲ್ಡೊ ಗುರುವಾರ ಆಡಬೇಕಾಗಿದ್ದ ಚೊಚ್ಚಲ ಪಂದ್ಯದ 28,000 ಟಿಕೆಟ್ ಗಳು  ಮಾರಾಟವಾಗಿದ್ದವು.

Similar News