ದ್ವಿತೀಯ ಟ್ವೆಂಟಿ-20: ಭಾರತ ವಿರುದ್ಧ ಶ್ರೀಲಂಕಾ ಜಯಭೇರಿ, ಸರಣಿ ಸಮಬಲ

ಶನಕ, ಮೆಂಡಿಸ್ ಅರ್ಧಶತಕ, ಸೂರ್ಯ, ಅಕ್ಷರ್ ಪಟೇಲ್ ಹೋರಾಟ ವ್ಯರ್ಥ

Update: 2023-01-05 17:22 GMT

 ಪುಣೆ, ಜ.5: ನಾಯಕ ದಸುನ್ ಶನಕ ಮುಂದಾಳತ್ವದಲ್ಲಿ ಅಬ್ಬರದ ಬ್ಯಾಟಿಂಗ್, ಕಸುನ್ ರಜಿತಾ(2-22) ಹಾಗೂ ದಿಲ್ಶನ್ ಮದುಶಂಕ (2-45) ಅಮೋಘ ಬೌಲಿಂಗ್ ನೆರವಿನಿಂದ ಶ್ರೀಲಂಕಾ ತಂಡ 2ನೇ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಆತಿಥೇಯ ಭಾರತವನ್ನು 16 ರನ್‌ನಿಂದ ಸೋಲಿಸಿದೆ. ಈ ಗೆಲುವಿನ ಮೂಲಕ ಶ್ರೀಲಂಕಾ 3 ಪಂದ್ಯಗಳ ಸರಣಿಯನ್ನು 1-1ರಿಂದ ಸಮಬಲಗೊಳಿಸಿದೆ.

ಗೆಲ್ಲಲು 207 ರನ್ ಗುರಿ ಪಡೆದ ಭಾರತವು ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಭಾರತದ ಪರ ಆಲ್‌ರೌಂಡರ್ ಅಕ್ಷರ್ ಪಟೇಲ್ (65 ರನ್, 31 ಎಸೆತ, 3 ಬೌಂಡರಿ, 6 ಸಿಕ್ಸರ್) ಸರ್ವಾಧಿಕ ಸ್ಕೋರ್ ಗಳಿಸಿದರು. ಸೂರ್ಯಕುಮಾರ್ ಯಾದವ್ ಅರ್ಧಶತಕ (51 ರನ್, 36 ಎಸೆತ, 3 ಬೌಂಡರಿ, 3 ಸಿಕ್ಸರ್)ಗಳಿಸಿದರು. ಶಿವಂ ಮಾವಿ 26 ರನ್ ಗಳಿಸಿದರು.
 
  ಕಠಿಣ ಗುರಿ ಪಡೆದಿದ್ದ ಭಾರತ 2.1ನೇ ಓವರ್‌ನಲ್ಲಿ 21 ರನ್‌ಗೆ 3 ವಿಕೆಟ್ ಕಳೆದುಕೊಂಡು ಕಳಪೆ ಆರಂಭ ಪಡೆಯಿತು. ಭಾರತ 57 ರನ್‌ಗೆ 5 ವಿಕೆಟ್ ಕಳೆದುಕೊಂಡಿತ್ತು. ಆಗ ಆರನೇ ವಿಕೆಟಿಗೆ 91 ರನ್ ಜೊತೆಯಾಟ ನಡೆಸಿದ ಸೂರ್ಯಕುಮಾರ್ ಹಾಗೂ ಪಟೇಲ್ ಗೆಲುವಿನ ವಿಶ್ವಾಸ ಮೂಡಿಸಿದ್ದರು. ಯಾದವ್ ವಿಕೆಟನ್ನು ಪಡೆದ ಮದುಶಂಕ ಶ್ರೀಲಂಕಾಕ್ಕೆ ಮೇಲುಗೈ ಒದಗಿಸಿದರು.

ಇದಕ್ಕೂ ಮೊದಲು ಟಾಸ್ ಸೋತು  ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಶ್ರೀಲಂಕಾ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 206 ರನ್ ಗಳಿಸಿದೆ. 

Similar News