ಪುಟಿನ್ ಗೆ ಉಸಿರಾಡಲು ಸ್ವಲ್ಪ ಅವಕಾಶ ಸಿಕ್ಕಿದೆ: ಕದನ ವಿರಾಮ ಘೋಷಣೆಗೆ ಬೈಡನ್ ಪ್ರತಿಕ್ರಿಯೆ

Update: 2023-01-06 17:29 GMT

ವಾಷಿಂಗ್ಟನ್, ಜ.6: ಆರ್ಥೊಡಾಕ್ಸ್ ಕ್ರಿಸ್ಮಸ್ ಸಂದರ್ಭ 2 ದಿನ ಕದನ ವಿರಾಮ ಘೋಷಿಸುವ ಪುಟಿನ್ ಘೋಷಣೆ ರಶ್ಯ ಸೈನಿಕರಿಗೆ ಉಸಿರಾಡಲು ಸ್ವಲ್ಪ ಅವಕಾಶ ದೊರಕಿಸುವ ಪ್ರಯತ್ನವಾಗಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಟೀಕಿಸಿದ್ದಾರೆ.

ಡಿಸೆಂಬರ್ 25 ಮತ್ತು ಹೊಸ ವರ್ಷದಂದು ಅವರು ಆಸ್ಪತ್ರೆ, ಶಿಶುವಿಹಾರ ಮತ್ತು ಚರ್ಚ್ಗಳ ಮೇಲೆ ಬಾಂಬ್ ದಾಳಿಗೆ ಸಿದ್ಧವಿದ್ದರು. ಬಹುಷಃ ಈಗ ಅವರಿಗೆ ಉಸಿರಾಡಲು ಸ್ವಲ್ಪ ಅವಕಾಶದ ಅಗತ್ಯವಿದೆ’ ಎಂದು ಬೈಡನ್ ಹೇಳಿದ್ದಾರೆ. 

ಪುಟಿನ್ ಅವರ ಕದನವಿರಾಮ ಸಿನಿಕತನದ ಪ್ರಯತ್ನವಾಗಿದೆ. ಈ ಬಿಡುವನ್ನು ರಶ್ಯ ‘ವಿರಾಮ ಪಡೆದು, ಮರುಸಂಘಟಿತಗೊಂಡು ಅಂತಿಮವಾಗಿ ಮರುದಾಳಿಗೆ’ ಬಳಸಿಕೊಳ್ಳಲಿದೆ. ತಾನು ಶಾಂತಿಯನ್ನು ಬಯಸುತ್ತಿದ್ದೇನೆ ಎಂದು ತೋರಿಸಿಕೊಂಡು ಜಗತ್ತನ್ನು ಮರುಳುಗೊಳಿಸಲು ಪುಟಿನ್ ಬಯಸುತ್ತಿದ್ದಾರೆ ಎಂದು ಅಮೆರಿಕ ವಿದೇಶಾಂಗ ಇಲಾಖೆಯ ವಕ್ತಾರ ನೆಡ್ ಪ್ರೈಸ್ ಹೇಳಿದ್ದಾರೆ.

ಕದನ ವಿರಾಮ ಘೋಷಣೆಯಿಂದ ಯುದ್ಧದ ಅಲೆಯಲ್ಲಿ ಬದಲಾವಣೆ ಕಂಡುಬರುವುದಿಲ್ಲ. ರಶ್ಯಕ್ಕೆ ಈ ಯುದ್ಧವನ್ನು ಅಂತ್ಯಗೊಳಿಸುವ, ಶಾಂತಿಗೆ ಆಸ್ಪದ ಮಾಡುವ ಬಗ್ಗೆ ನಿಜವಾಗಿಯೂ ಕಾಳಜಿಯಿದ್ದರೆ, ಅದು ಉಕ್ರೇನ್ನ ಸಾರ್ವಭೌಮ ಪ್ರದೇಶದಿಂದ ತನ್ನ ಪಡೆಯನ್ನು ಮೊದಲು ಹಿಂದಕ್ಕೆ ಪಡೆಯಲಿ ಎಂದು ಪ್ರೈಸ್ ಹೇಳಿದ್ದಾರೆ.

ಪುಟಿನ್ ಕದನವಿರಾಮ ಘೋಷಣೆಗೆ ಪ್ರತಿಕ್ರಿಯಿಸಿರುವ ಉಕ್ರೇನ್ ಅಧ್ಯಕ್ಷರ ಸಲಹೆಗಾರ ಮಿಖಾಯಿಲೊ ಪೊಡೊಲ್ಯಾಕ್ ‘ರಶ್ಯ ಪಡೆಗಳು ಮೊದಲು ಆಕ್ರಮಿತ ಉಕ್ರೇನ್ನಿಂದ ಹೊರನಡೆಯಲಿ, ಆ ಮೇಲೆ ತಾತ್ಕಾಲಿಕ ಕದನ ವಿರಾಮ ಘೋಷಿಸಲಿ’ ಎಂದಿದ್ದಾರೆ. ಉಕ್ರೇನ್ ಯಾವತ್ತೂ ವಿದೇಶಿ ನೆಲದ ಮೇಲೆ ದಾಳಿ ನಡೆಸಿಲ್ಲ ಮತ್ತು ನಾಗರಿಕರನ್ನು ಹತ್ಯೆಗೈದಿಲ್ಲ. 

ತನ್ನ ಭೂಪ್ರದೇಶದಲ್ಲಿ ಆಕ್ರಮಣಕಾರಿ ಸೈನ್ಯದ ಸದಸ್ಯರನ್ನು ಮಾತ್ರ ನಾಶಗೊಳಿಸಿದೆ. ನಿಮ್ಮ ಬೂಟಾಟಿಕೆ ನಿಮ್ಮಲ್ಲಿಯೇ ಇರಲಿ, ಮೊದಲು ಉಕ್ರೇನ್ನ ಭೂಪ್ರದೇಶದಿಂದ ಹೊರನಡೆಯಿರಿ ಮತ್ತು ಆ ಬಳಿಕ ತಾತ್ಕಾಲಿಕ ಕದನ ವಿರಾಮದ ಬಗ್ಗೆ ಮಾತನಾಡಿ’ ಎಂದವರು ಟ್ವೀಟ್ ಮಾಡಿದ್ದಾರೆ. ಈ ಮಧ್ಯೆ, ವ್ಲಾದಿಮಿರ್ ಪುಟಿನ್ ಘೋಷಿಸಿರುವ ಏಕಪಕ್ಷೀಯ ಕದನ ವಿರಾಮವು ಯುದ್ಧರಂಗದಲ್ಲಿ ಸಂಪೂರ್ಣವಾಗಿ ಜಾರಿಗೆ ಬಂದಿದೆ. ಜನವರಿ 7ರ ಮಧ್ಯರಾತ್ರಿವರೆಗೆ ಇದು ಜಾರಿಯಲ್ಲಿರುತ್ತದೆ ಎಂದು ರಶ್ಯದ ಟಿವಿ ವಾಹಿನಿ ವರದಿ ಮಾಡಿದೆ.

ರಶ್ಯದಿಂದ ಮತ್ತೆ ದಾಳಿ: ಉಕ್ರೇನ್ ವರದಿ

ರಶ್ಯ ಘೋಷಿಸಿದ ಏಕಪಕ್ಷೀಯ ಕದನವಿರಾಮ ಜಾರಿಗೆ ಬಂದಿದ್ದರೂ, ಶುಕ್ರವಾರ ರಶ್ಯ ಸೇನೆ ಪೂರ್ವ ಉಕ್ರೇನ್ನ ಕ್ರಮಟೋರ್ಸ್ಕ್ ನಗರದ ಮೇಲೆ ಕ್ಷಿಪಣಿ ದಾಳಿ ನಡೆಸಿದೆ ಎಂದು ಪೂರ್ವ ಪ್ರಾಂತದ ಉಪಮುಖ್ಯಸ್ಥ ಕಿರಿಲೊ ಟಿಮೊಶೆಂಕೊ ಹೇಳಿದ್ದಾರೆ. 

ಅವರೇ ಘೋಷಿಸಿದ ಕದನವಿರಾಮವನ್ನು ಅವರೇ ಉಲ್ಲಂಘಿಸಿದ್ದಾರೆ. ಆಕ್ರಮಣಕಾರರ ಪಡೆ 2 ಬಾರಿ ನಡೆಸಿದ ಕ್ಷಿಪಣಿ ದಾಳಿಯಲ್ಲಿ ವಸತಿ ಕಟ್ಟಡಕ್ಕೆ ಹಾನಿಯಾಗಿದೆ. ಆದರೆ ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದವರು ಟ್ವೀಟ್ ಮಾಡಿದ್ದಾರೆ.

Similar News