ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಿಂದ ಭಾರತದ ವೇಗಿ ಜಸ್ ಪ್ರೀತ್ ಬುಮ್ರಾ ಔಟ್

Update: 2023-01-09 09:33 GMT

ಹೊಸದಿಲ್ಲಿ: ಭಾರತದ ವೇಗಿ ಜಸ್ಪ್ರೀತ್ ಬುಮ್ರಾ Jasprit Bumrah ಅವರು ಫಿಟ್‌ನೆಸ್ ಕಳವಳದಿಂದಾಗಿ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈ ಹಿಂದೆ ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡಕ್ಕೆ ಬುಮ್ರಾರನ್ನು ವಾಪಸ್ ಕರೆಸಿತ್ತು. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟಿ-20 ಪಂದ್ಯದಲ್ಲಿ ಬುಮ್ರಾ ಕೊನೆಯ ಬಾರಿ ಭಾರತದ ಪರ ಆಡಿದ್ದರು. ಅಂದಿನಿಂದ, ಅವರು ಏಷ್ಯಾ ಕಪ್ ಹಾಗೂ  ಟಿ 20 ವಿಶ್ವಕಪ್ ಸೇರಿದಂತೆ  ಕೆಲವು ಪ್ರಮುಖ ಸ್ಪರ್ಧೆಗಳಿಂದ ವಂಚಿತರಾಗಿದ್ದರು. ಶ್ರೀಲಂಕಾ ವಿರುದ್ಧ ಏಕದಿನ ಸರಣಿಗೆ ಬುಮ್ರಾ ಭಾರತ ತಂಡಕ್ಕೆ ಮರಳುತ್ತಾರೆ ಎಂಬ ಭರವಸೆ ಹೆಚ್ಚಿತ್ತು.  ಆದರೆ ವೇಗಿ ಪೂರ್ಣ ಫಿಟ್‌ನೆಸ್‌ಗೆ ಮರಳಲು ಸ್ವಲ್ಪ ಸಮಯ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಭಾರತದ ಏಷ್ಯಾ ಕಪ್ ಹಾಗೂ ಟಿ 20 ವಿಶ್ವಕಪ್ ತಂಡಗಳಲ್ಲಿ ಬುಮ್ರಾ ಅನುಪಸ್ಥಿತಿಯು ಈ ಪಂದ್ಯಾವಳಿಗಳಲ್ಲಿ ತಂಡವು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾದುದರ  ಹಿಂದಿನ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಎಂದು ಪರಿಗಣಿಸಲಾಗಿದೆ. ಬುಮ್ರಾ ಅವರನ್ನು ಬೇಗನೆ ತಂಡಕ್ಕೆ ಕರೆಸಿಕೊಳ್ಳುವ ವಿಚಾರದಲ್ಲಿ  ಕೆಲವರು ಬಿಸಿಸಿಐ ಅನ್ನು ದೂಷಿಸಿದ್ದಾರೆ. ಈ ಬಾರಿ ಬುಮ್ರಾ ವಿಚಾರದಲ್ಲಿ ಯಾವುದೇ ಅಪಾಯವನ್ನು ತೆಗೆದುಕೊಳ್ಳಲು ಮಂಡಳಿಯು ಸಿದ್ಧವಾಗಿಲ್ಲ ಎನ್ನಲಾಗಿದೆ.

ಬುಮ್ರಾ ಸೆಪ್ಟೆಂಬರ್ 2022 ರಿಂದ ಸಕ್ರಿಯ ಕ್ರಿಕೆಟ್ ನಿಂದ  ಹೊರಗುಳಿದಿದ್ದಾರೆ. ಬೆನ್ನುನೋವಿನ ಕಾರಣ ಐಸಿಸಿ  ಪುರುಷರ ಟಿ-20 ವಿಶ್ವಕಪ್‌ನಿಂದ ಹೊರಗುಳಿದಿದ್ದರು.

Similar News