ಝೈದಾನ್ ರಂತಹ ದಂತಕತೆಗೆ ಅಗೌರವ ತೋರಬೇಡಿ: ಫ್ರಾನ್ಸ್ ಫುಟ್ಬಾಲ್ ಫೆಡರೇಶನ್ ಅಧ್ಯಕ್ಷರಿಗೆ ಎಂಬಾಪೆ ಸಲಹೆ

Update: 2023-01-09 17:46 GMT

ಪ್ಯಾರಿಸ್: ಫ್ರೆಂಚ್  ಫುಟ್ಬಾಲ್ ಫೆಡರೇಶನ್ (ಎಫ್ ಎಫ್ ಎಫ್) ಅಧ್ಯಕ್ಷ ನೋಯೆಲ್ ಲೆ ಗ್ರೆಟ್ ಅವರು ರವಿವಾರದಂದು ಫ್ರಾನ್ಸ್ ದಿಗ್ಗಜ ಝೈನುದ್ದೀನ್ ಝೈದಾನ್ ಕುರಿತು ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸ್ಟಾರ್ ಆಟಗಾರ  ಕೈಲಿಯನ್ ಎಂಬಾಪೆ  ಅವರು  "ಅಂತಹ ದಂತಕತೆಗೆ ಅಗೌರವ ತೋರಬೇಡಿ'' ಎಂದು ಹೇಳಿದ್ದಾರೆ.

ವಿಶ್ವಕಪ್ ಸ್ಟಾರ್  ಎಂಬಾಪೆ ರವಿವಾರ ತಡರಾತ್ರಿ ತಮ್ಮ ಟ್ವಿಟರ್ ಖಾತೆಯಲ್ಲಿ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ.

"ಝೈದಾನ್ ಅಂದರೆ ಫ್ರಾನ್ಸ್, ನೀವು ಅಂತಹ ದಂತಕತೆಯನ್ನು ಅಗೌರವಗೊಳಿಸಬೇಡಿ'' ಎಂದು ಟ್ವೀಟಿಸಿದ್ದಾರೆ.

ಮಾಜಿ ಆಟಗಾರ ಝೈದಾನ್ ಅವರನ್ನು ವಿಶ್ವ ಸಾಕರ್‌ನ ಶ್ರೇಷ್ಠರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. 1998 ರಲ್ಲಿ ಫ್ರಾನ್ಸ್ ಚೊಚ್ಚಲ ವಿಶ್ವಕಪ್ ಪ್ರಶಸ್ತಿ ಜಯಿಸಲು ನೇತೃತ್ವವಹಿಸಿದ್ದರು. ಫ್ರಾನ್ಸ್ 2000 ರಲ್ಲಿ ಯುರೋಪಿಯನ್ ಚಾಂಪಿಯನ್‌ಶಿಪ್ ಗೆದ್ದಾಗ ಮತ್ತೊಮ್ಮೆ ಝೈದಾನ್ ಮಿಂಚಿದ್ದರು. ಝೈದಾನ್  ಎರಡು ವಿಶ್ವಕಪ್ ಫೈನಲ್‌ಗಳಲ್ಲಿ ಗೋಲು ಗಳಿಸಿದ್ದರು ಎಂಬಾಪೆ ಅವರಂತೆಯೇ ಒಂದು ವಿಶ್ವಕಪ್ ಫೈನಲ್ ನಲ್ಲಿ ಸೋತಿದ್ದರು.

ಪ್ರಸ್ತುತ ಫ್ರಾನ್ಸ್ ಕೋಚ್ ಡಿಡಿಯರ್ ಡೆಶಾಂಪ್ಸ್ ಅವರ ಗುತ್ತಿಗೆಯನ್ನು ಜುಲೈ 2026 ರವರೆಗೆ ವಿಸ್ತರಿಸಿರುವ  ಲೆ ಗ್ರೇಟ್ ಅವರ ಬಳಿ  ಬ್ರೆಝಿಲ್ ನಲ್ಲಿ ಟೇಟ್ ಅವರಿಂದ ತೆರವಾದ ಕೋಚಿಂಗ್ ಹುದ್ದೆಯನ್ನು ಝೈದಾನ್ ವಹಿಸಿಕೊಳ್ಳಲಿದ್ದಾರೆಂಬ ವದಂತಿಗಳ ಬಗ್ಗೆ ಕೇಳಲಾಯಿತು.

"ಅವರು ಅಲ್ಲಿಗೆ ಹೋದರೆ ನನಗೆ ಆಶ್ಚರ್ಯವಾಗುತ್ತದೆ. ಆದರೆ ಅವರು ಇಷ್ಟವಾಗಿರುವುದನ್ನು ಮಾಡಬಹುದು, ಅದು ನನಗೆ ಸಂಬಂಧಿಸುವುದಿಲ್ಲ. ನಾನು ಅವರನ್ನು (ಝೈದಾನ್) ಎಂದಿಗೂ ಭೇಟಿ  ಮಾಡಿಲ್ಲ, ಹಾಗೂ ನಾವು (ಎಫ್‌ಎಫ್‌ಎಫ್) ಡಿಡಿಯರ್‌ನೊಂದಿಗೆ ಬೇರ್ಪಡುವ ಮಾರ್ಗಗಳನ್ನು ಎಂದಿಗೂ ಪರಿಗಣಿಸಲಿಲ್ಲ. ಝೈದಾನ್  ದೊಡ್ಡ ತಂಡವೊಂದಕ್ಕೆ, ರಾಷ್ಟ್ರೀಯ ತಂಡಕ್ಕೆ ಹೋಗಬಹುದು... ಝೈದಾನ್ ನನ್ನನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಾರೆಯೇ? ಖಂಡಿತವಾಗಿಯೂ ಇಲ್ಲ, ನಾನು ಅವರ ಫೋನ್  ಕರೆಯನ್ನು ಕೂಡ  ಸ್ವೀಕರಿಸುತ್ತಿರಲಿಲ್ಲ'' ಎಂದು  ನೋಯೆಲ್ ಲೆ ಗ್ರೆಟ್ ಹೇಳಿದ್ದಾರೆ.

Similar News