ಏಕದಿನ ರ‍್ಯಾಂಕಿಂಗ್: ವಿರಾಟ್, ರೋಹಿತ್, ಸಿರಾಜ್‌ಗೆ ಭಡ್ತಿ

ಟಿ-20ಯಲ್ಲಿ ನಂ.1 ಸ್ಥಾನ ಉಳಿಸಿಕೊಂಡ ಸೂರ್ಯಕುಮಾರ್

Update: 2023-01-11 17:13 GMT

ದುಬೈ, ಜ.11: ಭಾರತದ ಬ್ಯಾಟಿಂಗ್ ಶಕ್ತಿಗಳಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ, ವೇಗದ ಬೌಲರ್ ಮುಹಮ್ಮದ್ ಸಿರಾಜ್ ಬುಧವಾರ ಬಿಡುಗಡೆಯಾದ ಐಸಿಸಿ ಪುರುಷರ ಏಕದಿನ ರ್ಯಾಂಕಿಂಗ್‌ನಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ್ದಾರೆ.

ಶ್ರೀಲಂಕಾ ವಿರುದ್ಧ ಮಂಗಳವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಶತಕ ಗಳಿಸಿದ್ದ ಕೊಹ್ಲಿ 2 ಸ್ಥಾನ ಮೇಲಕ್ಕೇರಿ 6ನೇ ಸ್ಥಾನ ತಲುಪಿದರು. ಗುವಾಹಟಿ ಏಕದಿನದಲ್ಲಿ 83 ರನ್ ಗಳಿಸಿದ್ದ ರೋಹಿತ್ 8ನೇ ಸ್ಥಾನಕ್ಕೇರಿದರೆ, ಶ್ರೀಲಂಕಾದ ನಾಯಕ ದಸುನ್ ಶನಕ 20 ಸ್ಥಾನ ಭಡ್ತಿ ಪಡೆದು 61ನೇ ಸ್ಥಾನ ತಲುಪಿದರು.

ಬೌಲಿಂಗ್ ಪಟ್ಟಿಯಲ್ಲಿ ಮುಹಮ್ಮದ್ ಸಿರಾಜ್ 4 ಸ್ಥಾನ ಭಡ್ತಿ ಪಡೆದು 18ನೇ ಸ್ಥಾನ ತಲುಪಿದ್ದಾರೆ. ಲಂಕಾ ವಿರುದ್ಧದ ಪಂದ್ಯದಲ್ಲಿ ಸಿರಾಜ್ 2 ವಿಕೆಟ್ ಪಡೆದಿದ್ದರು.

ನಂ.1 ಸ್ಥಾನ ಉಳಿಸಿಕೊಂಡ ಸೂರ್ಯಕುಮಾರ್: ಟ್ವೆಂಟಿ-20 ರ್ಯಾಂಕಿಂಗ್‌ನಲ್ಲಿ ಸೂರ್ಯಕುಮಾರ ಯಾದವ್ ನಂ.1 ಸ್ಥಾನದಲ್ಲಿಯೇ ಮುಂದುವರಿದಿದ್ದಾರೆ. ಶ್ರೀಲಂಕಾ ವಿರುದ್ಧದ 3ನೇ ಟ್ವೆಂಟಿ-20 ಪಂದ್ಯದಲ್ಲಿ ಯಾದವ್ ಆಕರ್ಷಕ ಶತಕ ಸಿಡಿಸಿದ್ದರು. ಇದು ಅವರ ಅಗ್ರ ಸ್ಥಾನವನ್ನು ಭದ್ರಪಡಿಸಿದೆ.
 

Similar News