ತಾಂತ್ರಿಕ ದೋಷ: ಅಮೆರಿಕದಾದ್ಯಂತ ಹಾರಾಟ ನಿಲ್ಲಿಸಿದ ವಿಮಾನಗಳು; ಪ್ರಯಾಣಿಕರ ಪರದಾಟ

Update: 2023-01-11 17:41 GMT

ನ್ಯೂಯಾರ್ಕ್: ಕಂಪ್ಯೂಟರ್ ವ್ಯತ್ಯಯದಿಂದ ಅಮೆರಿಕಾದ ಎಲ್ಲ ವಿಮಾನಗಳು ಹಾರಾಟ ಸ್ಥಗಿತಗೊಂಡಿದ್ದು, ಇದರಿಂದ ಸಾವಿರಾರು ಪ್ರಯಾಣಿಕರು ವಿಮಾನ ನಿಲ್ದಾಣಗಳಲ್ಲಿ ಪರದಾಡುವಂತಾಗಿದೆ. ಅಮೆರಿಕಾದೊಳಗೆ,  ಹೊರದೇಶಗಳಿಂದ ಒಳಗೆ ಬರುವ ಅಥವಾ ಅಮೆರಿಕಾದಿಂದ ಹೊರದೇಶಗಳಿಗೆ ಹೋಗುವ ಕನಿಷ್ಠ ಪಕ್ಷ 400 ವಿಮಾನಗಳ ಹಾರಾಟ ಸ್ಥಗಿತಗೊಂಡಿದೆ ಎಂದು Reuters ಸುದ್ದಿ ಸಂಸ್ಥೆ ವರದಿ ಮಾಡಿದೆ.

ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್‌ನ ಕಂಪ್ಯೂಟರ್ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದಾಗಿ ವಿಮಾನಗಳ ಹಾರಾಟ ಸ್ಥಗಿತಗೊಳಿಸುವುದು ಅನಿವಾರ್ಯವಾಯಿತು ಎಂದು ಅಮೆರಿಕಾದ ರಾಯಿಟರ್ಸ್ ಸುದ್ದಿ ಸಂಸ್ಥೆಯ ವರದಿಯಲ್ಲಿ ಹೇಳಲಾಗಿದೆ. ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಅಮೆರಿಕಾದ ಸರ್ಕಾರಿ ಸಂಸ್ಥೆಯಾಗಿದ್ದು, ಅದು ದೇಶದ ನಾಗರಿಕ ವಿಮಾನ ಯಾನ ವಲಯವನ್ನು ನಿಯಂತ್ರಿಸುತ್ತದೆ. ವಾಯುಯಾನ ವ್ಯವಸ್ಥೆಗೆ ಅಮೆರಿಕಾದ ನಿರ್ದೇಶನ ಎಂಬ ಕಂಪ್ಯೂಟರ್ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದಾಗಿ ವಿಮಾನಗಳ ಹಾರಾಟ ಸ್ಥಗಿತಗೊಂಡಿದೆ ಎಂದು ವರದಿಯಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ FAA, ವಾಯುಯಾನ ವ್ಯವಸ್ಥೆಗೆ ಒದಗಿಸುವ ತನ್ನ ನಿರ್ದೇಶನವನ್ನು ಮರುಸ್ಥಾಪಿಸುವ ಪ್ರಯತ್ನವನ್ನು ನಡೆಸಲಾಗುತ್ತಿದೆ ಎಂದು ಹೇಳಿದೆ.

"ತಂತ್ರಜ್ಞರು ಸದ್ಯ ವ್ಯವಸ್ಥೆಯನ್ನು ಮರುಸ್ಥಾಪಿಸುವ ಪ್ರಯತ್ನದಲ್ಲಿದ್ದು, ಈ ಹಂತದಲ್ಲಿ ಸೇವೆಯ ಮರುಸ್ಥಾಪನೆಗೆ ತಗಲುವ ಕಾಲಾವಧಿಯನ್ನು ಅಂದಾಜಿಸಲು ಸಾಧ್ಯವಿಲ್ಲ" ಎಂದು FAA ಅಂತರ್ಜಾಲ ತಾಣದ ಪ್ರಕಟಣೆಯನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ಈ ಕುರಿತು ಬುಧವಾರ ಸಂಜೆ ಟ್ವೀಟ್ ಮಾಡಿರುವ FAA, "FAA ವಾಯುಯಾನ ವ್ಯವಸ್ಥೆಗೆ ತನ್ನ ನಿರ್ದೇಶನವನ್ನು ಮರುಸ್ಥಾಪಿಸುವ ಪ್ರಯತ್ನ ಮಾಡುತ್ತಿದೆ. ನಾವು ಅಂತಿಮ ಹಂತದ ದೃಢೀಕರಣ ಪರಿಶೀಲನೆ ನಡೆಸುತ್ತಿದ್ದು, ಈಗ ವ್ಯವಸ್ಥೆಯನ್ನು ಮರುಚಾಲನೆ ಮಾಡಲಾಗುತ್ತಿದೆ. ದೇಶಾದ್ಯಂತ ವಾಯುಯಾನ ವ್ಯವಸ್ಥೆಯು ತೊಂದರೆಗೀಡಾಗಿದ್ದು, ನಾವು ಈ ಪ್ರಯತ್ನದಲ್ಲಿ ಪ್ರಗತಿ ಸಾಧಿಸುತ್ತಿದ್ದಂತೆಯೇ ಕ್ಷಣಕ್ಷಣದ ಮಾಹಿತಿಯನ್ನು ಒದಗಿಸುತ್ತೇವೆ" ಎಂದು ಭರವಸೆ ನೀಡಿದೆ.

ಈ ಮುನ್ನ ಹಾಟ್‌ಲೈನ್ ಮೂಲಕ ನಿರ್ವಹಿಸಲಾಗುತ್ತಿದ್ದ ವಾಯುಯಾನ ವ್ಯವಸ್ಥೆಯ ನಿರ್ದೇಶನವನ್ನು ಇದೀಗ ಅಂತರ್ಜಾಲಕ್ಕೆ ಬದಲಾಯಿಸಲಾಗಿದೆ. 

Similar News