ಪುಟಿನ್ ಆಪ್ತನ ಉಕ್ರೇನ್ ಪೌರತ್ವ ರದ್ದು: ಝೆಲೆನ್ಸ್ಕಿ ಘೋಷಣೆ

Update: 2023-01-11 18:25 GMT

ಕೀವ್, ಜ.11: ಯುದ್ಧಕ್ಕೂ ಮುನ್ನ ಉಕ್ರೇನ್ನಲ್ಲಿ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ನಿಕಟ ಸಹವರ್ತಿ ಎಂದು ಗುರುತಿಸಿಕೊಂಡಿದ್ದ ವಿಕ್ಟರ್ ಮೆಡ್ವೆಡ್ಚುಕ್ ಅವರು ದೇಶದ್ರೋಹದ ಕೃತ್ಯ ಎಸಗಿರುವುದರಿಂದ ಉಕ್ರೇನ್ನಲ್ಲಿ ಹೊಂದಿರುವ ಪೌರತ್ವವನ್ನು ರದ್ದುಗೊಳಿಸುವುದಾಗಿ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಘೋಷಿಸಿದ್ದಾರೆ. 
ಉಕ್ರೇನ್ನ ಮಾಜಿ ಸಂಸತ್ ಸದಸ್ಯರಾಗಿರುವ ಮೆಡ್ವೆಡ್ಚುಕ್ ಅವರನ್ನು ಯುದ್ಧ ಆರಂಭಗೊಂಡ ಬಳಿಕ ಉಕ್ರೇನ್ ಬಂಧಿಸಿತ್ತು.

ಆದರೆ ಸೆಪ್ಟಂಬರ್ನಲ್ಲಿ ಕೈದಿಗಳ ವಿನಿಮಯ ಪ್ರಕ್ರಿಯೆಯಲ್ಲಿ ಅವರನ್ನು ರಶ್ಯಕ್ಕೆ ಹಸ್ತಾಂತರಿಸಿತ್ತು. ಸೆಪ್ಟಂಬರ್ನಲ್ಲಿ ರಶ್ಯವು ಉಕ್ರೇನ್ನ 215 ಕೈದಿಗಳನ್ನು ಉಕ್ರೇನ್ಗೆ ಹಸ್ತಾಂತರಿಸಿದ್ದರೆ ಉಕ್ರೇನ್ 50 ಕೈದಿಗಳನ್ನು ಹಸ್ತಾಂತರಿಸಿದೆ. ಉಕ್ರೇನ್ನ ರಾಷ್ಟ್ರೀಯ ಭದ್ರತೆ ಮತ್ತು ವಲಸೆ ಸೇವೆ ವಿಭಾಗ ಒದಗಿಸಿದ ದಾಖಲೆಯ ಆಧಾರದಲ್ಲಿ ಹಾಗೂ ನಮ್ಮ ಸಂವಿಧಾನದ ಪ್ರಕಾರ, ವಿಕ್ಟರ್ ಮೆಡ್ವೆಡ್ಚುಕ್ ಸೇರಿದಂತೆ 4 ಮಂದಿಯ ಪೌರತ್ವವನ್ನು ರದ್ದುಗೊಳಿಸಲು ನಿರ್ಧರಿಸಿದ್ದೇನೆ .

ಉಕ್ರೇನ್ನ ಜನರಿಗೆ ಸೇವೆ ಸಲ್ಲಿಸುವ ಬದಲು ಕೊಲೆಗಡುಕರ ಪರ ವಹಿಸಿದವರ ವಿರುದ್ಧದ ಈ ಕ್ರಮ ಸೂಕ್ತವಾಗಿದೆ ಎಂದು ಝೆಲೆನ್ಸ್ಕಿ ಹೇಳಿದ್ದಾರೆ. ಉಕ್ರೇನ್ನ ಮಾಜಿ ಸಂಸದ, ರಶ್ಯದ ಏಜೆಂಟ್ ಎಂದು ಆರೋಪ ಹೊತ್ತಿರುವ ಆಂಡ್ರಿಯ್ ಡೆರ್ಕಾಚ್, ಮತ್ತೊಬ್ಬ ಸಂಸದ ರೆನಾಟ್ ಕುಝ್ಮಿನ್, ರಶ್ಯ ಗುಪ್ತಚರ ಸಂಸ್ಥೆಯ ಏಜೆಂಟ್ ಎಂದು ಹೇಳಲಾದ ತರಾಸ್ ಕೊಝಕ್ರ ಪೌರತ್ವ ರದ್ದುಗೊಳಿಸಲಾಗುವುದು ಎಂದು ಝೆಲೆನ್ಸ್ಕಿ ಹೇಳಿದ್ದಾರೆ.

Similar News