×
Ad

ಭಾರತದ ಭೂಭಾಗಕ್ಕೆ ಬಾಂಬ್‌ ಹಾಕಿದ ಮ್ಯಾನ್ಮಾರ್‌ ಸೇನೆ !

Update: 2023-01-12 18:52 IST

ಹೊಸದಿಲ್ಲಿ: ಮಿಜೋರಾಂನ ಚಂಫಾಯಿ ಜಿಲ್ಲೆಗೆ ಹತ್ತಿರದಲ್ಲಿರುವ ತನ್ನ ಬಂಡುಕೋರರ ತರಬೇತಿ ಶಿಬಿರದ ಮೇಲೆ ಮ್ಯಾನ್ಮಾರ್‌ ಮಿಲಿಟರಿ ಮಂಗಳವಾರ ವಾಯುದಾಳಿ ನಡೆಸುವ ವೇಳೆ ಭಾರತೀಯ ಭೂಪ್ರದೇಶದ ಮೇಲೆ ಬಾಂಬ್‌ ಹಾಕಿದೆ ಎಂದು ಘಟನೆಯ ಪ್ರತ್ಯಕ್ಷದರ್ಶಿ ಸಾಕ್ಷಿ ಹಾಗೂ ಭಾರತೀಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮ್ಯಾನ್ಮಾರ್‌ನ ಸೇನೆಯು ಮಂಗಳವಾರ ಚಿನ್‌ ನ್ಯಾಷನಲ್‌ ಆರ್ಮಿ ಇದರ ಮುಖ್ಯ ಕಾರ್ಯಾಲಯವಾದ ಕ್ಯಾಂಪ್‌ ವಿಕ್ಟೋರಿಯಾ ಮೇಲೆ ದಾಳಿ ನಡೆಸಿತ್ತು. ಈ ಜನಾಂಗೀಯ ಸಶಸ್ತ್ರ ಗುಂಪು ಮ್ಯಾನ್ಮಾರ್‌ ಮಿಲಿಟರಿಯೊಂದಿಗೆ ಸಂಘರ್ಷ ನಡೆಸಿದ ಇತಿಹಾಸ ಹೊಂದಿದೆ. ಕ್ಯಾಂಪ್‌ ವಿಕ್ಟೋರಿಯಾ ಟಿಯಾವು ನದಿಯಾಚೆ ಭಾರತ-ಮ್ಯಾನ್ಮಾರ್‌ ಗಡಿಯಲ್ಲಿದೆ. ಇಲ್ಲಿ ಎರಡೂ ದೇಶಗಳನ್ನು ಒಂದು ಸಣ್ಣ ಸೇತುವೆ ಜೋಡಿಸುತ್ತದೆ.

ಮಂಗಳವಾರ ಅಪರಾಹ್ನ 3,30 ಕ್ಕೆ ಮ್ಯಾನ್ಮಾರ್‌ ಯುದ್ಧ ವಿಮಾನಗಳು ಬಾಂಬ್‌ ದಾಳಿ ಆರಂಭಿಸಿದ ನಂತರ  ತನ್ನ ಗ್ರಾಮದ ವಫಾಯಿ ಎಂಬಲ್ಲಿ ಸ್ಫೋಟದ ಸದ್ದುಗಳು ಕೇಳಿಸಿದ್ದವು, ಈ ಗ್ರಾಮವು ಕ್ಯಾಂಪ್‌ ವಿಕ್ಟೋರಿಯಾಗೆ ಸನಿಹದಲ್ಲಿದೆ ಎಂದು ಸ್ಥಳೀಯ ನಿವಾಸಿ ಮಾಯೆಂಗ ಹೇಳಿದ್ದಾರೆ.

"ಒಂದು ಬಾಂಬ್‌ ಮಿಜೋರಾಂ ಕಡೆ ಬಿದ್ದರೆ ಇನ್ನೊಂದು ಭಾರತೀಯ ಭಾಗದ ಟಿಯಾವು ನದಿಯಿಂದ ಸುಮಾರು 30 ಮೀಟರ್‌ ದೂರದಲ್ಲಿ ಬಿತ್ತು," ಎಂದು ಆ ನಿವಾಸಿ ಹೇಳಿದ್ದಾರೆ.

ಚಂಫಾಯಿ ಇಲ್ಲಿನ ಹಿರಿಯ ಅಧಿಕಾರಿ ಕೂಡ ಈ ಘಟನೆಯನ್ನು ದೃಢೀಕರಿಸಿದ್ದಾರೆ. ಫರ್ಕವನ್‌ ಗ್ರಾಮ ಮತ್ತು ಸುತ್ತಲಿನ ಸ್ಥಳಗಳ ನಿವಾಸಿಗಳಿಗೆ ಸ್ಫೋಟದ ಸದ್ದುಗಳು ಕೇಳಿಸಿದ್ದವು. ಕೆಲವೊಂದು ಬಾಂಬ್‌ ಚೂರುಗಳು ನದಿಯಲ್ಲಿ ಬಿದ್ದಿದ್ದವು ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಘಟನೆ ಗಡಿ ಭಾಗದ ಗ್ರಾಮಗಳಲ್ಲಿ ಭೀತಿ ಸೃಷ್ಟಿಸಿದೆ. ಬುಧವಾರ ಕೂಡ ಇನ್ನೂ ಎರಡು ಬಾಂಬ್‌ಗಳು ಬಿದ್ದಿವೆ ಎಂದು ಯಂಗ್‌ ಮಿಝೋ ಅಸೋಸಿಯೇಶನ್‌ ಸದಸ್ಯ ಮಾಂಗ ಎಂಬವರು ಹೇಳಿದ್ದಾರೆ. ಇದರಿಂದಾಗಿ ಗ್ರಾಮಸ್ಥರು ಹಾಗೂ ಕಾರ್ಮಿಕರು ಕೆಲಸದ ಸ್ಥಳಗಳಿಗೆ ಹೋಗಲು ಹೆದರುತ್ತಿದ್ದಾರೆ. ಬಾರತ ಮ್ಯಾನ್ಮಾರ್‌ಗೆ ಎಚ್ಚರಿಕೆ ನೀಡಬೇಕೆಂದು ಆಗ್ರಹಿಸುತ್ತಿದ್ದಾರೆ.

ಮಂಗಳವಾರದ ವಾಯು ದಾಳಿಯಲ್ಲಿ ಚಿನ್‌ ನ್ಯಾಷನಲ್‌ ಆರ್ಮಿಯ ಐದು ಕೇಡರ್‌ಗಳು ಹತ್ಯೆಗೀಡಾಗಿದ್ದಾರೆ ಎಂದು ತಿಳಿದು ಬಂದಿಲ್ಲ.

ಭಾರತ ಸರ್ಕಾರ ಈ ಬೆಳವಣಿಗೆ ಕುರಿತು ಇನ್ನೂ ಪ್ರತಿಕ್ರಿಯಿಸಿಲ್ಲ.

Similar News