ನಾಝಿ ಸಮವಸ್ತ್ರ ಧರಿಸಿ ಹುಟ್ಟುಹಬ್ಬ ಆಚರಿಸಿದ್ದ ಆಸ್ಟ್ರೇಲಿಯಾದ ಮುಖಂಡ: ವಿವಾದ

Update: 2023-01-12 16:53 GMT

ಸಿಡ್ನಿ, ಜ.12: ಆಸ್ಟ್ರೇಲಿಯಾದ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ನ್ಯೂ ಸೌತ್ವೇಲ್ಸ್  ರಾಜ್ಯದ ಪ್ರೀಮಿಯರ್ ಡೊಮಿನಿಕ್ ಪೆರೊಟೆಟ್, ತನ್ನ 21ನೇ ಹುಟ್ಟುಹಬ್ಬ ಆಚರಣೆಯಂದು ನಾಝಿ ಸಮವಸ್ತ್ರ ಧರಿಸಿರುವುದನ್ನು ಗುರುವಾರ ಒಪ್ಪಿಕೊಂಡಿದ್ದು `ಈ ಪ್ರಕರಣದಿಂದ ನಾಚಿಕೆಪಟ್ಟು ತಲೆತಗ್ಗಿಸುವಂತಾಗಿದೆ' ಎಂದು ಹೇಳಿದ್ದಾರೆ.

`ನಾನಾಗ 21 ವರ್ಷದವನಾಗಿದ್ದೆ. ಹುಟ್ಟು ಹಬ್ಬ ಆಚರಿಸುವ  ಮೋಜಿನಲ್ಲಿ ನಾಝಿಗಳ ಸಮವಸ್ತ್ರ ಧರಿಸಿದ್ದೆ. ಆ ಸಮಯದಲ್ಲಿ ಮುಗ್ಧನಾಗಿದ್ದೆ ಮತ್ತು ತನ್ನ ಕೃತ್ಯದ ಮಹತ್ವ ಅಥವಾ ಹತ್ಯಾಕಾಂಡದಲ್ಲಿ ಕೊಲ್ಲಲ್ಲಟ್ಟ ಲಕ್ಷಾಂತರ ಜನರಲ್ಲಿ ಸಮವಸ್ತ್ರವು ಪ್ರತಿನಿಧಿಸುವ ನೋವನ್ನು ಅರ್ಥ ಮಾಡಿಕೊಳ್ಳಲಿಲ್ಲ. ಆ ಭಯಾನಕ ನಿರ್ಧಾರಕ್ಕಾಗಿ ನಿಜಕ್ಕೂ ನಾನು ವಿಷಾದಿಸುತ್ತೇನೆ. ನಾನು ಮಾಡಿದ ಕೃತ್ಯದ ಬಗ್ಗೆ  ನಾಚಿಕೆಪಡುತ್ತಿದ್ದೇನೆ.  ಇದು ದೇಶಾದ್ಯಂತದ ಜನರಿಗೆ, ವಿಶೇಷವಾಗಿ ಯಹೂದಿ ಸಮುದಾಯದ ಸದಸ್ಯರು, ಹತ್ಯಾಕಾಂಡದಿಂದ ಬದುಕುಳಿದವರು, ಹಿರಿಯರು ಮತ್ತವರ ಕುಟುಂಬಗಳಿಗೆ ಉಂಟು ಮಾಡುವ ನೋವಿಗೆ ನಾನು ನಿಜವಾಗಿಯೂ ವಿಷಾದಿಸುತ್ತೇನೆ ಎಂದವರು ಹೇಳಿದ್ದಾರೆ.

ಇದೀಗ 40 ವರ್ಷದವರಾಗಿರುವ ಪೆರೊಟೆಟ್ ಮಾರ್ಚ್ನಲ್ಲಿ ನಡೆಯಲಿರುವ ಚುನಾವಣೆಗೆ ಸಿದ್ಧತೆ ನಡೆಸುತ್ತಿದ್ದಂತೆಯೇ  19 ವರ್ಷದ ಹಿಂದೆ ಅವರು ನಾಝಿ ಸಮವಸ್ತ್ರ ಧರಿಸಿದ್ದ ಫೋಟೋ ಮುನ್ನೆಲೆಗೆ ಬಂದಿದೆ. `ನಾಜಿ ಸಾಂಕೇತಿಕತೆಯನ್ನು ಲಘುವಾಗಿ ಪರಿಗಣಿಸಬಾರದು ಮತ್ತು ನಾಝಿಯಂತೆ ಬಟ್ಟೆ ಧರಿಸುವುದು ತಮಾಷೆಯಲ್ಲ.

ಈ ಘಟನೆಯು- ಎಷ್ಟೇ ಹಳೆಯದಾಗಿದ್ದರೂ, ನಾಜಿ ಆಡಳಿತದ ಭಯಾನಕ, ಅಸಹ್ಯಕರ  ವರ್ತನೆಯ ಬಗ್ಗೆ ಎಲ್ಲಾ ಆಸ್ಟ್ರೇಲಿಯನ್ನರಿಗೆ ನಿರಂತರವಾಗಿ ಶಿಕ್ಷಣವನ್ನು ನೀಡುವ ಅಗತ್ಯತೆಯನ್ನು ನೆನಪಿಸುತ್ತದೆ' ಎಂದು ನ್ಯೂಸೌತ್ವೇಲ್ಸ್ ಯೆಹೂದಿಗಳ ಸಂಘಟನೆ ಹೇಳಿಕೆ ನೀಡಿದೆ.

Similar News