1000ಕ್ಕೂ ಹೆಚ್ಚು ಫೆಲಸ್ತೀನೀಯರ ಸ್ಥಳಾಂತರಕ್ಕೆ ಇಸ್ರೇಲ್ ಸೇನೆ ಯೋಜನೆ: ವರದಿ

ಎರಡು ತಿಂಗಳ ಬಳಿಕ ಸರಕಾರಕ್ಕೆ ಮಾಹಿತಿ

Update: 2023-01-12 17:21 GMT

ರಮಲ್ಲಾ, ಜ.12: ಇಸ್ರೇಲ್ ಸರಕಾರಕ್ಕೆ ಮಾಹಿತಿ ನೀಡದೆ 1000ಕ್ಕೂ ಹೆಚ್ಚು ಫೆಲಸ್ತೀನೀಯರನ್ನು ಪಶ್ಚಿಮದಂಡೆಯ  ದಕ್ಷಿಣ ಹೆಬ್ರಾನ್ ಪ್ರಾಂತದ ಬಳಿಯ ಗ್ರಾಮಗಳಿಂದ ಬಲವಂತವಾಗಿ ಸ್ಥಳಾಂತರಿಸಲು ಇಸ್ರೇಲ್‌ನ ಸಶಸ್ತ್ರ ಪಡೆಯ ಅಧಿಕಾರಿಗಳು ಯೋಜನೆ ರೂಪಿಸಿದ್ದಾರೆ ಎಂದು ಇಸ್ರೇಲ್ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ಈ ಪ್ರದೇಶವನ್ನು  ಸೇನೆಯ ದೈನಂದಿನ  ತರಬೇತಿ ಮತ್ತು ಅಭ್ಯಾಸಕ್ಕೆ ಮೀಸಲಿಡುವ ಉದ್ದೇಶದಿಂದ ಹೆಬ್ರಾನ್ ಪ್ರಾಂತದ ಬಳಿಯ ಪ್ರದೇಶದ 12 ಗ್ರಾಮಗಳ   ನಿವಾಸಿಗಳನ್ನು ಸ್ಥಳಾಂತರಿಸಲು ಇಸ್ರೇಲ್ ಸೇನೆಯ ಸೆಂಟ್ರಲ್ ಡಿಸ್ಟ್ರಿಕ್ಟ್ ಕಮಾಂಡ್ ಕಳೆದ ನವೆಂಬರ್ ನಲ್ಲಿಯೇ ಸಿದ್ಧತೆ ಆರಂಭಿಸಿತ್ತು. ಆದರೆ ಇಸ್ರೇಲ್ ನಲ್ಲಿ ಬೆಂಜಮಿನ್ ನೆತನ್ಯಾಹು ನೇತೃತ್ವದ  ಸರಕಾರ ರಚನೆಯಾದ ಬಳಿಕ, ಕಳೆದ ವಾರವಷ್ಟೇ ಸರಕಾರಕ್ಕೆ ಮಾಹಿತಿ ನೀಡಿದೆ. ಸ್ಥಳಾಂತರ ಪ್ರಕ್ರಿಯೆಗೆ ಈ ವರ್ಷ ಚಾಲನೆ ದೊರಕುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಫೆಲಸ್ತೀನಿಯನ್ ಪ್ರಾಂತದಿಂದ ಹೊರಗೆ ಅಥವಾ ಪ್ರಾಂತದ ಒಳಗೆ ನಾಗರಿಕರ ಬಲವಂತದ ಸ್ಥಳಾಂತರವನ್ನು ಅಂತರಾಷ್ಟ್ರೀಯ ಮಾನವೀಯ ಕಾನೂನಿನಡಿ ನಿಷೇಧಿಸಲಾಗಿದೆ.

ಕಳೆದ ವಾರ ಪಶ್ಚಿಮದಂಡೆಯಲ್ಲಿ ನಡೆದ ಸಭೆಯಲ್ಲಿ ಇಸ್ರೇಲ್‌ನ ನಾಗರಿಕ ಆಡಳಿತ ಘಟಕ(ಆಕ್ರಮಿತ ಪ್ರದೇಶದಲ್ಲಿ ನಾಗರಿಕ ವ್ಯವಹಾರಗಳ ಉಸ್ತುವಾರಿ ನಡೆಸುವ ಸಮಿತಿ)ವು ಫೆಲಸ್ತೀನಿಯನ್ ಅಥಾರಿಟಿ(ಪಿಎ)ಗೆ ಈ ನಿರ್ಧಾರದ ಬಗ್ಗೆ ತಿಳಿಸಿದೆ. ಪ್ರಸ್ತಾವಿತ ಯೋಜನೆಯ ಪ್ರಕಾರ, ಈ ಗ್ರಾಮಗಳ ನಿವಾಸಿಗಳು ಸಮೀಪದ 2 ಪ್ರದೇಶಗಳಲ್ಲಿ ತಮಗಿಷ್ಟ ಬಂದ ಒಂದು ಪ್ರದೇಶಕ್ಕೆ ಸ್ಥಳಾಂತರಗೊಳ್ಳಬಹುದು.

ಆದರೆ ಈ ಪ್ರಕರಣದಲ್ಲಿ ಇಸ್ರೇಲ್ ಸೇನಾಧಿಕಾರಿಗಳ ವರ್ತನೆಯ ಬಗ್ಗೆ ಇಸ್ರೇಲ್ ಭದ್ರತಾ ಪಡೆ ಮತ್ತು ರಾಜಕೀಯ  ವಲಯದ ಮೂಲಗಳಿಂದ ತೀವ್ರ ಕಳವಳ ವ್ಯಕ್ತವಾಗಿದೆ. ಇದು ಫೆಲಸ್ತೀನೀಯರ ಮೇಲೆ ಪರಿಣಾಮ ಬೀರುವ ಭವಿಷ್ಯದ ಯೋಜನೆಗಳು,  ರಾಜಕಾರಣಿಗಳು, ಕಟ್ಟ ಬಲಪಂಥೀಯರು ಮತ್ತು  ವಸಾಹತುಗಾರರನ್ನು ಸಮರ್ಥಿಸಿಕೊಳ್ಳುವ ಸೇನೆಯ ಸಾಮರ್ಥ್ಯದ ಮೇಲೆ ಪರಿಣಾಮ ಬೀರುವ ಎಚ್ಚರಿಕೆಯ ಸಂಕೇತವಾಗಿದೆ ಎಂದು ಇಸ್ರೇಲ್ ಭದ್ರತಾ ಪಡೆಯ ಮೂಲಗಳು ಕಳವಳ ವ್ಯಕ್ತಪಡಿಸಿವೆ.

ಯೋಜನೆಯಲ್ಲಿ ಪ್ರಸ್ತಾವಿಸಿರುವ ಪ್ರದೇಶ  ಸುಮಾರು 13.5 ಚದರ ಮೈಲುಗಳಷ್ಟು ವಿಸ್ತಾರವಾಗಿದ್ದು  5 ಶಾಲೆಗಳು ಮತ್ತು 5 ವೈದ್ಯಕೀಯ ಕೇಂದ್ರಗಳನ್ನು ಹೊಂದಿದೆ. ಇಲ್ಲಿ 215 ಕುಟುಂಬಗಳಿದ್ದು 569 ಮಕ್ಕಳ ಸಹಿತ ಸುಮಾರು 1,150 ಫೆಲೆಸ್ತೀನೀಯರು ವಾಸಿಸುತ್ತಿದ್ದಾರೆ. ಇಸ್ರೇಲ್ ಆಡಳಿತದ ನಿರ್ಬಂಧಿತ ಮತ್ತು ತಾರತಮ್ಯದ ಯೋಜನೆಯಿಂದಾಗಿ ಇಲ್ಲಿನ ನಿವಾಸಿಗಳು ಮಾನವೀಯ ನೆರವನ್ನು ಅವಲಂಬಿಸಿದ್ದಾರೆ. 

ಇಲ್ಲಿರುವ ಬಹುತೇಕ ಮನೆಗಳು, ಪ್ರಾಣಿಗಳ ಆಶ್ರಯತಾಣ ಮತ್ತು ಸಮುದಾಯ ಮೂಲಸೌಕರ್ಯಗಳನ್ನು ಅನುಮತಿ ಪಡೆಯದೆ ನಿರ್ಮಿಸಲಾಗಿದೆ ಎಂದು ಹೇಳಿರುವ ಇಸ್ರೇಲ್ ಅಧಿಕಾರಿಗಳು ಇವನ್ನು ಕೆಡವಲು ಅಥವಾ ಹೊಸದಾಗಿ ನಿರ್ಮಿಸಲಾಗುವ ಮನೆಗಳ ನಿರ್ಮಾಣ  ಕಾಮಗಾರಿಯ ಸ್ಥಗಿತಕ್ಕೆ ಆದೇಶ ಜಾರಿಗೊಳಿಸಿದ್ದಾರೆ. ಈ ಪ್ರದೇಶದಲ್ಲಿ ಮನೆ ನಿರ್ಮಾಣಕ್ಕೆ ಲೈಸೆನ್ಸ್ ಪಡೆಯಲು ಫೆಲಸ್ತೀನೀಯರಿಗೆ ಬಹುತೇಕ ಅಸಾಧ್ಯವಾಗಿರುವುದರಿಂದ ಇಲ್ಲಿ ಮನೆ, ಮೂಲಸೌಕರ್ಯದ ಅಭಿವೃದ್ಧಿಗೆ ತೊಡಕಾಗಿದೆ.

ಅಂತರಾಷ್ಟ್ರೀಯ ದಾನಿಗಳ ಬೆಂಬಲದೊಂದಿಗೆ ನಿರ್ಮಿಸಲಾದ ಪ್ರದೇಶದಲ್ಲಿರುವ ಶಾಲೆಗಳು, ವೈದ್ಯಕೀಯ ಕೇಂದ್ರಗಳನ್ನು ನೆಲಸಮಗೊಳಿಸುವಂತೆ ಇಸ್ರೇಲ್ ಅಧಿಕಾರಿಗಳು ಸೂಚಿಸಿದ್ದಾರೆ. ಈ ಪ್ರದೇಶದ ಜನರನ್ನು ಬಲವಂತದಿಂದ ಹೊರಹಾಕುವುದು ಹಲವು ಮಾನವೀಯ ಸಮಸ್ಯೆಗಳನ್ನು ಸೃಷ್ಟಿಸಲಿದೆ ಎಂದು ಮಾನವ ಹಕ್ಕುಗಳ ಕಾರ್ಯಕರ್ತರು ಎಚ್ಚರಿಸಿದ್ದಾರೆ. 

Similar News