ಭಾರತೀಯ ಮೂಲದ ದ.ಆಫ್ರಿಕಾದ ಸ್ವಾತಂತ್ರ್ಯ ಹೋರಾಟಗಾರ್ತಿ ಫ್ರೆನೆ ಗಿನ್ವಾಲಾ ನಿಧನ
ಜೊಹಾನ್ಸ್ಬರ್ಗ್, ಜ.13: ದಕ್ಷಿಣ ಆಫ್ರಿಕಾದ ಭಾರತೀಯ ಮೂಲದ ಸ್ವಾತಂತ್ರ್ಯ ಹೋರಾಟಗಾರ್ತಿ, ‘ನ್ಯಾಷನಲ್ ಆರ್ಡರ್ಸ್’ ಗೌರವ ಪಡೆದಿದ್ದ ಡಾ. ಫ್ರೆನೆ ಗಿನ್ವಾಲಾ(90 ವರ್ಷ) ನಿಧನರಾಗಿದ್ದಾರೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಹಿರಿಯ ಸ್ವಾತಂತ್ರ್ಯ ಹೋರಾಟಗಾರ್ತಿ ಡಾ. ಫ್ರೆನೆ ಗಿನ್ವಾಲಾ ತಮ್ಮ ಮನೆಯಲ್ಲಿ ಗುರುವಾರ ಸಂಜೆ ನಿಧನರಾಗಿದ್ದಾರೆ.
ಗಿನ್ವಾಲಾ ಅವರು ನಮ್ಮ ಆಗಿನ ಹೊಸ ಸಂವಿಧಾನದ ನೀತಿ ಮತ್ತು ನಿರೀಕ್ಷೆಗಳನ್ನು ಪ್ರತಿಪಾದಿಸಿದರು ಮತ್ತು ಕಾರ್ಯಕರ್ತರು ಹಾಗೂ ನಾಯಕರನ್ನು ಸಂಸದರನ್ನಾಗಿ ಪರಿವರ್ತಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು, ಮತ್ತು ಈ ಮೂಲಕ ದೇಶದ ಬದಲಾವಣೆಗೆ ಕಾರಣರಾಗಿದ್ದರು’ ಎಂದು ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸ ತಮ್ಮ ಶೋಕಸಂದೇಶದಲ್ಲಿ ಹೇಳಿದ್ದಾರೆ.
ಫ್ರೆನೆ ಗಿನ್ವಾಲಾ ಭಾರತದಿಂದ ದಕ್ಷಿಣ ಆಫ್ರಿಕಾಕ್ಕೆ ವಲಸೆ ಹೋಗಿದ್ದ ಪಾರ್ಸಿ ಕುಟುಂಬದ ಸದಸ್ಯೆ. ನೆಲ್ಸನ್ ಮಂಡೇಲಾ ಅವರು 1994ರಲ್ಲಿ ದಕ್ಷಿಣ ಆಫ್ರಿಕಾದ ಮೊದಲ ಪ್ರಜಾಸತ್ತಾತ್ಮಕ ರೀತಿಯಲ್ಲಿ ಚುನಾಯಿತ ಅಧ್ಯಕ್ಷರಾದ ನಂತರ, ದೇಶದ ಪ್ರಪ್ರಥಮ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ ಹೆಗ್ಗಳಿಗೆ ಡಾ. ಗಿನ್ವಾಲಾ ಅವರದ್ದಾಗಿತ್ತು.