ವಿದ್ಯಾರ್ಥಿನಿಯರಿಗೆ ಋತುಚಕ್ರದ ರಜೆ: ಕೇರಳ ವಿ.ವಿ.ಯ ಐತಿಹಾಸಿಕ ನಿರ್ಧಾರ

Update: 2023-01-14 18:09 GMT

ಹೊಸದಿಲ್ಲಿ, ಜ. 14: ಇದೇ ಮೊದಲ ಬಾರಿಗೆ ಕೇರಳದ ವಿಶ್ವವಿದ್ಯಾನಿಲಯವೊಂದು ತನ್ನ ವಿದ್ಯಾರ್ಥಿಗಳಿಗೆ ಋತುಚಕ್ರದ ರಜೆ ನೀಡಲು ನಿರ್ಧರಿಸಿದೆ. ಕೊಚ್ಚಿ ವಿಜ್ಞಾನ ಹಾಗೂ ತಂತ್ರಜ್ಞಾನ ವಿಶ್ವವಿದ್ಯಾನಿಲಯ (ಕುಸಾಟ್)ದ ವಿದ್ಯಾರ್ಥಿಗಳ ಒಕ್ಕೂಟದ ಬೇಡಿಕೆಯ ಹಿನ್ನಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಈ ಸಂಬಂಧ ವಿಶ್ವವಿದ್ಯಾನಿಲಯ ಆದೇಶ ನೀಡಿದ್ದು, ವಿದ್ಯಾರ್ಥಿನಿಯರ ಬಹು ಕಾಲದ ಬೇಡಿಕೆ ಈಡೇರಿದಂತಾಗಿದೆ. ಇದರಿಂದ ವಿಶ್ವವಿದ್ಯಾನಿಲಯದ ಪಿಎಚ್‌ಡಿ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ವಿಭಾಗಗಳಲ್ಲಿ ವ್ಯಾಸಾಂಗ ಮಾಡುತ್ತಿರುವ 4,000ಕ್ಕೂ ಅಧಿಕ ವಿದ್ಯಾರ್ಥಿನಿಯರಿಗೆ ನೆರವಾಗಲಿದೆ.

ಕುಸಾಟ್‌ನ ವಿದ್ಯಾರ್ಥಿನಿಯರು ಹಾಜರಾತಿ ಕೊರತೆ ಸಂದರ್ಭ ಈ ಋತುಚಕ್ರ ರಜೆಯ ಸೌಲಭ್ಯ ಪಡೆಯಬಹುದು. ಪ್ರತಿ ಸೆಮಿಸ್ಟರ್‌ಗೆ ಅವರಿಗೆ ಶೇ. 2 ಹೆಚ್ಚುವರಿ ರಜೆ ನೀಡಲಾಗುವುದು. ಪ್ರಸಕ್ತ ಶೇ. 75 ಹಾಜರಾತಿ ಇದ್ದವರು ಮಾತ್ರ ಸೆಮಿಸ್ಟರ್ ಪರೀಕ್ಷೆ ಬರೆಯಬಹುದು. ಇದಕ್ಕಿಂತ ಕಡಿಮೆ ಹಾಜರಾತಿ ಇದ್ದಲ್ಲಿ ಕುಲಪತಿ ಅವರಿಗೆ ಅರ್ಜಿ ಸಲ್ಲಿಸಿ ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯ. ಆದರೆ, ಋತುಚಕ್ರದ ರಜೆಗೆ ವೈದ್ಯಕೀಯ ಪ್ರಮಾಣ ಪತ್ರದ ಅಗತ್ಯ ಇಲ್ಲ. ವಿದ್ಯಾರ್ಥಿನಿಯರು ಕೇವಲ ಅರ್ಜಿ ಸಲ್ಲಿಸಿದರೆ ಸಾಕು.

ಎಸ್‌ಎಫ್‌ಐನ ವಿದ್ಯಾರ್ಥಿಗಳ ನೇತೃತ್ವದ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಒಕ್ಕೂಟ ಋತುಚಕ್ರದ ರಜೆ ನೀಡುವಂತೆ ವಿಶ್ವವಿದ್ಯಾನಿಲಯಕ್ಕೆ ಒತ್ತಾಯಿಸಿತ್ತು. ಒಕ್ಕೂಟದ ಮಧ್ಯಸ್ಥಿಕೆಯಲ್ಲಿ ವಿಶ್ವವಿದ್ಯಾನಿಲಯ ಈ ನಿರ್ಧಾರ ತೆಗೆದುಕೊಂಡಿದೆ. 

Similar News