ತವರು ನೆಲದಲ್ಲಿ ಹೆಚ್ಚು ಶತಕ ಸಿಡಿಸಿ ವಿಶ್ವ ದಾಖಲೆ ನಿರ್ಮಿಸಿದ ವಿರಾಟ್ ಕೊಹ್ಲಿ

ಸಚಿನ್ ತೆಂಡುಲ್ಕರ್ ದೀರ್ಘಕಾಲದ ದಾಖಲೆ ಮುರಿದ ಸ್ಟಾರ್ ಬ್ಯಾಟರ್

Update: 2023-01-15 13:34 GMT

ತಿರುವನಂತಪುರ, ಡಿ.15: ಶ್ರೀಲಂಕಾ ವಿರುದ್ಧ ರವಿವಾರ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಕೇವಲ 85 ಎಸೆತಗಳಲ್ಲಿ ತನ್ನ 46ನೇ ಶತಕ ಸಿಡಿಸಿರುವ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಬ್ಯಾಟಿಂಗ್ ದಂತಕತೆ ಸಚಿನ್ ತೆಂಡುಲ್ಕರ್ ಅವರ ದೀರ್ಘಕಾಲದ ದಾಖಲೆಯನ್ನು ಮುರಿದರು.

110 ಎಸೆತಗಳಲ್ಲಿ ಔಟಾಗದೆ 166 ರನ್ ಕಲೆ ಹಾಕಿದ ಟೀಮ್ ಇಂಡಿಯಾದ ಮಾಜಿ ನಾಯಕ ಕೊಹ್ಲಿ ತವರಿನಲ್ಲಿ ಅತ್ಯಂತ ಹೆಚ್ಚು ಏಕದಿನ ಶತಕ ಸಿಡಿಸುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದರು.  ಕೊಹ್ಲಿ ಭಾರತದಲ್ಲಿ 21ನೇ ಶತಕ ಸಿಡಿಸಿದರು. ಸಚಿನ್ ತೆಂಡುಲ್ಕರ್ ಅವರ ದೀರ್ಘಕಾಲದ ದಾಖಲೆಯನ್ನು (20 ಶತಕ) ಮುರಿದರು.  ಇದೀಗ ಅವರು ತವರು ನೆಲದಲ್ಲಿ ಹೆಚ್ಚು ಶತಕ ಗಳಿಸಿದ ವಿಶ್ವದ ಏಕೈಕ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ 14 ಏಕದಿನ ಶತಕ ಸಿಡಿಸಿರುವ ಹಾಶಿಂ ಅಮ್ಲ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

   ಇಂದು ದಾಖಲಾದ ಶತಕದೊಂದಿಗೆ ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಅವರ ಒಟ್ಟು ಶತಕಗಳ ಸಂಖ್ಯೆ 46ಕ್ಕೆ ಏರಿಕೆಯಾಗಿದೆ. ತನ್ನ ಹಿಂದಿನ 4 ಇನಿಂಗ್ಸ್‌ಗಳಲ್ಲಿ ಮೂರನೇ ಶತಕವನ್ನು ಗಳಿಸಿರುವ ಕೊಹ್ಲಿ ಅವರು ತೆಂಡುಲ್ಕರ್ ಅವರ ಸಾರ್ವಕಾಲಿಕ ಶತಕದ(49)ದಾಖಲೆ ಮುರಿಯುವತ್ತ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಮಾಸ್ಟರ್ ಬ್ಲಾಸ್ಟರ್ ತೆಂಡುಲ್ಕರ್‌ಗಿಂತ ಹೆಚ್ಚು ಶತಕವನ್ನು ಯಾರೂ ಗಳಿಸಿಲ್ಲ. ಕೊಹ್ಲಿ ಅವರು ತೆಂಡುಲ್ಕರ್ ದಾಖಲೆ ಸರಿಗಟ್ಟುವುದರಿಂದ ಕೇವಲ 3 ಶತಕದಿಂದ ಹಿಂದಿದ್ದಾರೆ. ತೆಂಡುಲ್ಕರ್ ಒಟ್ಟು 452ನೇ ಇನಿಂಗ್ಸ್‌ನಲ್ಲಿ 49 ಶತಕ ಗಳಿಸಿದ್ದರೆ, ಕೊಹ್ಲಿ 46ನೇ ಶತಕ ಪೂರೈಸಲು 252 ಇನಿಂಗ್ಸ್‌ಗಳಲ್ಲಿ ಆಡಿದ್ದಾರೆ.

ಇದೇ ವೇಳೆ ಕೊಹ್ಲಿ ಅವರು ಶ್ರೀಲಂಕಾ ವಿರುದ್ಧ 10ನೇ ಶತಕ ಸಿಡಿಸಿದರು. ಈ ಮೂಲಕ ತೆಂಡುಲ್ಕರ್‌ರ ಮತ್ತೊಂದು ದಾಖಲೆಯನ್ನು ಮುರಿದರು. ಮಾತ್ರವಲ್ಲ ತನ್ನದೇ ದಾಖಲೆ(ವೆಸ್ಟ್‌ಇಂಡೀಸ್ ವಿರುದ್ಧ 9 ಶತಕ)ಯನ್ನು ಉತ್ತಮಪಡಿಸಿಕೊಂಡರು. ತೆಂಡುಲ್ಕರ್ ಅವರು ಆಸ್ಟ್ರೇಲಿಯ ವಿರುದ್ಧ 9 ಶತಕಗಳನ್ನು ಗಳಿಸಿದ್ದರು. ಕೊಹ್ಲಿ ಒಂದೇ ಎದುರಾಳಿಯ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ಶತಕ (10)ಸಿಡಿಸಿದ ಭಾರತದ ಮೊದಲ ಬ್ಯಾಟರ್ ಎನಿಸಿಕೊಂಡರು.

 ಶ್ರೀಲಂಕಾದ ಮಾಜಿ ನಾಯಕ ಮಹೇಲ ಜಯವರ್ಧನೆಯವರನ್ನು(12,650 ರನ್) ಹಿಂದಿಕ್ಕಿದ ಕೊಹ್ಲಿ ಇದೀಗ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಗರಿಷ್ಠ ರನ್ ಗಳಿಸಿದ ವಿಶ್ವದ 5ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.
 

Similar News