ಶತಕೋಟ್ಯಧಿಪತಿಗಳ ಮೇಲೆ ಶೇ. 5ರಷ್ಟು ತೆರಿಗೆ ವಿಧಿಸಿದರೂ ಎರಡು ಶತಕೋಟಿ ಜನರನ್ನು ಬಡತನದಿಂದ ಮುಕ್ತಗೊಳಿಸಬಹುದು: ವರದಿ

Update: 2023-01-16 13:44 GMT

ದಾವೋಸ್: "ವಿಶ್ವದ ಎಲ್ಲ ಶತಕೋಟ್ಯಧಿಪತಿಗಳ ಮೇಲೆ ಶೇ. 5ರಷ್ಟು ವೈಯಕ್ತಿಕ ಮತ್ತು ಬಂಡವಾಳ ತೆರಿಗೆ ವಿಧಿಸುವುದರಿಂದ 1.7 ಟ್ರಿಲಿಯನ್ ಡಾಲರ್ ಸಂಗ್ರಹಿಸಬಹುದಾಗಿದ್ದು, ಈ ಮೊತ್ತದಿಂದ ಎರಡು ಶತಕೋಟಿ ಜನರನ್ನು ಬಡತನದಿಂದ ಮೇಲೆತ್ತಬಹುದಾಗಿದೆ" ಎಂದು ಸ್ವಿಝರ್ಲೆಂಡ್‌ನ ದಾವೋಸ್‌ನಲ್ಲಿ ಆಯೋಜನೆಗೊಂಡಿರುವ ಜಾಗತಿಕ ಆರ್ಥಿಕ ವೇದಿಕೆ ಸಮಾವೇಶದ ಮುನ್ನಾ ದಿನ ಬ್ರಿಟನ್ ಮೂಲದ ದತ್ತಿ ಸಂಸ್ಥೆ Oxfam ಬಿಡುಗಡೆ ಮಾಡಿರುವ "ಸಿರಿವಂತರ ಅಳಿವು-ಉಳಿವು" ಎಂಬ ವರದಿಯಲ್ಲಿ ಹೇಳಲಾಗಿದೆ.

ಜಾಗತಿಕ ಆರ್ಥಿಕ ವೇದಿಕೆ ಸಮಾವೇಶದಲ್ಲಿ ಜಗತ್ತಿನ ಅತ್ಯಂತ ಶ್ರೀಮಂತರು ಪಾಲ್ಗೊಳ್ಳುತ್ತಿದ್ದು, ಇದರ ಬೆನ್ನಿಗೇ "ಕಳೆದ ಎರಡು ವರ್ಷಗಳ ಅವಧಿಯಲ್ಲಿ ಜಗತ್ತಿನ ಒಟ್ಟು ಸಂಪತ್ತಿನ ಎರಡು ಪಟ್ಟು ಸಂಪತ್ತನ್ನು ಶೇ. 1ರಷ್ಟಿರುವ ಅತ್ಯಂತ ಶ್ರೀಮಂತರು ಕಲೆ ಹಾಕಿದ್ದಾರೆ" ಎಂದು ಆಕ್ಸ್‌ಫಾಮ್ ದತ್ತಿ ಸಂಸ್ಥೆಯ ವರದಿಯಲ್ಲಿ ಹೇಳಲಾಗಿದೆ.

ವಿಶ್ವದ ಶತಕೋಟ್ಯಧಿಪತಿಗಳು ಅವರ ಕ್ರೋಡೀಕೃತ ಸಂಪತ್ತಿಗೆ ಹೋಲಿಸಿದರೆ, ಕಳೆದ ವರ್ಷ ಎರಡು ಟ್ರಿಲಿಯನ್ ಡಾಲರ್ ನಷ್ಟ ಅನುಭವಿಸಿದ್ದಾರೆ ಎಂದು ಡಿಸೆಂಬರ್ 2022ರಲ್ಲಿ Forbes ವರದಿ ಮಾಡಿತ್ತು. ಆದರೆ, 2019-20ರ ನಡುವೆ ಗಳಿಸಿದ 1.9 ಟ್ರಿಲಿಯನ್ ಡಾಲರ್ ಹಾಗೂ 2021ರ ಅವಧಿಯಲ್ಲಿ ಗಳಿಸಿದ 1.6 ಟ್ರಿಲಿಯನ್ ಡಾಲರ್‌ ಮೊತ್ತವನ್ನು ಒಟ್ಟುಗೂಡಿಸಿದಾಗ, ಕಳೆದ ಮೂರು ವರ್ಷಗಳಲ್ಲಿ ವಿಶ್ವದ ಅತ್ಯಂತ ಶ್ರೀಮಂತರು 1.5 ಟ್ರಿಲಿಯನ್ ಡಾಲರ್ ಲಾಭ ಗಳಿಸಿದ್ದಾರೆ. ವಾಸ್ತವವಾಗಿ, ಕಳೆದ ದಶಕದಲ್ಲಿ ಸೃಷ್ಟಿಯಾಗಿರುವ ಸಂಪತ್ತಿನ ಪೈಕಿ ಅರ್ಧದಷ್ಟು ಸಂಪತ್ತನ್ನು ಅತ್ಯಂತ ಶ್ರೀಮಂತರ ಪೈಕಿಯೇ ಶ್ರೀಮಂತರಾಗಿರುವವರು ವಶಪಡಿಸಿಕೊಂಡಿದ್ದಾರೆ ಎಂದು ಆಕ್ಸ್‌ಫಾಮ್ ಸತ್ಯಶೋಧನೆಯಲ್ಲಿ ಪತ್ತೆ ಹಚ್ಚಲಾಗಿದೆ.

ಈ ವರದಿಯಲ್ಲಿ ಅಮೆರಿಕಾದ 25 ಮಂದಿ ಅತ್ಯಂತ ಶ್ರೀಮಂತ ವ್ಯಕ್ತಿಗಳು 2014-18ರ ನಡುವೆ ಪಾವತಿಸಿರುವ ತೆರಿಗೆ ದರ ಶೇ. 3.4ರಷ್ಟಿದೆ ಎಂದು ಹೇಳಲಾಗಿದೆ.

100 ಮಿಲಿಯನ್ ಡಾಲರ್‌ಗಿಂತ ಹೆಚ್ಚು ಮೊತ್ತದ ಸಂಪತ್ತು ಹೊಂದಿರುವ ವ್ಯಕ್ತಿಗಳ ಮೇಲೆ ಕನಿಷ್ಠ ಶೇ. 20ರಷ್ಟು ತೆರಿಗೆ ವಿಧಿಸುವ ಪ್ರಸ್ತಾಪವನ್ನು ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಮಂಡಿಸಿದ್ದರು. ಆದರೆ, ತೀವ್ರ ಕಾನೂನು ಸಂಘರ್ಷಗಳು ಎದುರಾಗುವ ಸಾಧ್ಯತೆಯ ಕಾರಣಕ್ಕೆ ಆ ಪ್ರಸ್ತಾಪವನ್ನು ಅಮೆರಿಕಾ ಕಾಂಗ್ರೆಸ್ ತಿರಸ್ಕರಿಸಿತ್ತು.

2021ರಿಂದ ಸಲ್ಲಿಕೆಯಾಗಿರುವ ತೆರಿಗೆ ಪಾವತಿ ಅರ್ಜಿಗಳಿಂದ ಸೋರಿಕೆಯಾಗಿರುವ ಮಾಹಿತಿ ಪ್ರಕಾರ, ಇನ್ನೂ ನಗದಾಗದ ಬಂಡವಾಳ ಲಾಭವನ್ನು ಹೊರತುಪಡಿಸಿ, ಅಮೆಝಾನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೆಫ್ ಬೆಝೋಸ್ ಪಾವತಿಸಿರುವ ತೆರಿಗೆಯ ಅಸಲಿ ದರ ಶೇ. 0.98 ಮಾತ್ರ ಆಗಿದೆ.

100 ಅಮೆರಿಕಾ ಅತಿ ಶ್ರೀಮಂತರ ನಗದಾಗದ ಬಂಡವಾಳ ಲಾಭದ ಮೇಲೆ ತೆರಿಗೆ ವಿಧಿಸದಿರುವುದರಿಂದ ಒಂದು ಟ್ರಿಲಿಯನ್ ಡಾಲರ್ ಮೊತ್ತ ಉಳಿಯುತ್ತದೆ. 2021ರಲ್ಲಿ ಜಾಗತಿಕ ಅಭಿವೃದ್ಧಿ ನೆರವಿಗಾಗಿ ವಿನಿಯೋಗಿಸಲಾಗಿರುವ ಮೊತ್ತಕ್ಕೆ ಹೋಲಿಸಿದರೆ ಈ ಮೊತ್ತವು ಐದು ಪಟ್ಟು ಹೆಚ್ಚಿದೆ. ಈ ಅವಧಿಯಲ್ಲಿ ವಿನಿಯೋಗಿಸಲಾದ ಮೊತ್ತ 178 ಶತಕೋಟಿ ಡಾಲರ್ ಮಾತ್ರ ಎಂಬುದರತ್ತ ಆಕ್ಸ್‌ಫಾಮ್ ವರದಿ ಬೊಟ್ಟು ಮಾಡಿದೆ.

ಆಕ್ಸ್‌ಫಾಮ್ ಸಂಶೋಧನೆಯ ಪ್ರಕಾರ, 2022ರಲ್ಲಿ  ಜಗತ್ತಿನಾದ್ಯಂತ ಇರುವ 1.7 ಶತಕೋಟಿ ಉದ್ಯೋಗಿಗಳ ವೇತನವನ್ನು ಹಣದುಬ್ಬರದ ತೀವ್ರತೆ ಹಿಂದೆ ಹಾಕಿದೆ. ಇದರಿಂದ ತಮ್ಮ ವೇತನಗಳು ಏರಿಕೆಯಾದರೂ, ಹಿಂದಿನ ವರ್ಷಕ್ಕಿಂತ ಕಡಿಮೆ ವೆಚ್ಚ ಮಾಡಲು ಮಾತ್ರ ಉದ್ಯೋಗಿಗಳಿಗೆ ಸಾಧ್ಯವಾಗಿದೆ ಎಂದು ಹೇಳಲಾಗಿದೆ.

ತೆರಿಗೆ ಸುಧಾರಣಾ ನೀತಿಗಳನ್ನು ಜಾರಿಗೊಳಿಸದಿದ್ದರೆ, ಅತ್ಯಂತ ಶ್ರೀಮಂತರು ಹಾಗೂ ಉಳಿದ ಜಗತ್ತಿನ ನಡುವಿನ ಕಂದಕ ಹಿಗ್ಗುತ್ತಲೇ ಹೋಗಲಿದೆ ಎಂದು ಆಕ್ಸ್‌ಫಾಮ್ ವರದಿಯಲ್ಲಿ ಎಚ್ಚರಿಸಲಾಗಿದೆ.

Similar News