​‘ದುರಂತ’ ತಪ್ಪಿಸಲು ಉಕ್ರೇನ್ನಲ್ಲಿ ಉಪಸ್ಥಿತಿ ವಿಸ್ತರಣೆ: ಐಎಇಎ ಪ್ರಧಾನ ನಿರ್ದೇಶಕ ರಫೇಲ್ ಗ್ರಾಸಿ

Update: 2023-01-16 16:50 GMT

ಕೀವ್, ಜ.16: ರಶ್ಯ-ಉಕ್ರೇನ್ ನಡುವಿನ ಸಂಘರ್ಷ ಮುಂದುವರಿದಿರುವ ಹಿನ್ನೆಲೆಯಲ್ಲಿ, ಎಲ್ಲಾ ಸಂಭಾವ್ಯ ಸುರಕ್ಷತೆ ಮತ್ತು ಭದ್ರತೆಯನ್ನು ಒದಗಿಸಲು ಉಕ್ರೇನ್ನಲ್ಲಿ ಸಂಸ್ಥೆಯು ತನ್ನ ಅಸ್ತಿತ್ವವನ್ನು ವಿಸ್ತರಿಸುತ್ತದೆ ಎಂದು ಅಂತರಾಷ್ಟ್ರೀಯ ಪರಮಾಣು ಇಂಧನ ಸಂಸ್ಥೆ (ಐಎಇಎ) ಪ್ರಧಾನ ನಿರ್ದೇಶಕ ರಫೇಲ್ ಗ್ರಾಸಿ ಸೋಮವಾರ ಹೇಳಿದ್ದಾರೆ.

‘ಇದೀಗ ನಡೆಯುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿ, ಪರಮಾಣು ದುರಂತವನ್ನು ತಡೆಯಲು ನೆರವಾಗುವ ನಿಟ್ಟಿನಲ್ಲಿ ಉಕ್ರೇನ್ನಲ್ಲಿನ ನಮ್ಮ ಉಪಸ್ಥಿತಿಯನ್ನು ವಿಸ್ತರಿಸಲಾಗುವುದು. ಪರಮಾಣು ಸುರಕ್ಷತೆ ಮತ್ತು ಭದ್ರತೆಯಲ್ಲಿ ನೆರವು ನೀಡಲು ದೇಶದ ಎಲ್ಲಾ ಪರಮಾಣು ಘಟಕಗಳಲ್ಲಿ ನಾವು ನಿಯೋಜಿಸುತ್ತಿರುವ ಈ ಕಾರ್ಯಾಚರಣೆಯನ್ನು ಮುನ್ನಡೆಸಲು ನನಗೆ ಹೆಮ್ಮೆಯೆನಿಸುತ್ತಿದೆ’ ಎಂದವರು ಟ್ವೀಟ್ ಮಾಡಿದ್ದಾರೆ.
ಉಕ್ರೇನ್ನ ನಿಪ್ರೊ ನದಿ ದಡದಲ್ಲಿರುವ ಯುರೋಪ್ನ ಬೃಹತ್ ಪರಮಾಣು ಇಂಧನ ಸ್ಥಾವರವಾಗಿರುವ ಝಪೋರಿಝಿಯಾ ಪರಮಾಣು ಸ್ಥಾವರ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶವನ್ನು ಯುದ್ಧ ಆರಂಭವಾದ ಕೆಲ ದಿನಗಳಲ್ಲೇ ರಶ್ಯ ಸೇನೆ ನಿಯಂತ್ರಣಕ್ಕೆ ಪಡೆದಿದೆ. ಆ ಬಳಿಕದ ದಿನಗಳಲ್ಲಿ ಈ ಪ್ರದೇಶ ಹಲವು ಬಾರಿ ಭೀಕರ ವಾಯುದಾಳಿಗೆ ಸಾಕ್ಷಿಯಾಗಿದ್ದು ಈ ದಾಳಿಗೆ ರಶ್ಯ ಮತ್ತು ಉಕ್ರೇನ್ ಪರಸ್ಪರರನ್ನು ದೂಷಿಸುತ್ತಿವೆ. ವಾಯುದಾಳಿಯ ಹಿನ್ನೆಲೆಯಲ್ಲಿ ಅಣುಸ್ಥಾವರದ ಸುರಕ್ಷತೆಯ ಬಗ್ಗೆ ಆತಂಕ ಹೆಚ್ಚಿದೆ.

‘ಝಪೋರಿಝಿಯಾ ಸ್ಥಾವರದ ಸುತ್ತಮುತ್ತಲಿನ ಪ್ರದೇಶವನ್ನು ರಕ್ಷಣಾ ವಲಯ ಎಂದು ಗುರುತಿಸುವ ಅಗತ್ಯವನ್ನು ಆದಷ್ಟು ಬೇಗ ಕಾರ್ಯರೂಪಕ್ಕೆ ತರಲು ನಾನು ಬದ್ಧನಾಗಿದ್ದೇನೆ. ಈ ಕುರಿತು ರಶ್ಯ ಮತ್ತು ಉಕ್ರೇನ್ ಜತೆ ಸಮಾಲೋಚನೆ ಮುಂದುವರಿದಿದೆ. ರಕ್ಷಣಾ ವಲಯದ ಬಗ್ಗೆ ಆದಷ್ಟು ಶೀಘ್ರ ಒಪ್ಪಂದಕ್ಕೆ ಬಂದು ಅನುಷ್ಟಾನಗೊಳ್ಳುವ ವಿಶ್ವಾಸವಿದೆ ಎಂದು ರಫೇಲ್ ಗ್ರಾಸಿ ಹೇಳಿದ್ದಾರೆ.

ಉಕ್ರೇನ್ನ ಎಲ್ಲಾ ಪರಮಾಣು ಇಂಧನ ಸಂಸ್ಥೆಗಳಲ್ಲಿ ಪರಮಾಣು ಸುರಕ್ಷೆ ಮತ್ತು ಭದ್ರತೆ ತಜ್ಞರ ತಂಡದ ನಿರಂತರ ಉಪಸ್ಥಿತಿಯನ್ನು ಮುಂದಿನ ವಾರ ಪ್ರಧಾನ ನಿರ್ದೇಶಕ ರಫೇಲ್ ಗ್ರಾಸಿ ಸ್ಥಾಪಿಸಲಿದ್ದಾರೆ. ಇದು ಪ್ರಸ್ತುತ ಮಿಲಿಟರಿ ಸಂಘರ್ಷದ ಹಿನ್ನೆಲೆಯಲ್ಲಿ ಸಂಭಾವ್ಯ ದುರಂತವನ್ನು ತಡೆಯುವ ಅಂತರಾಷ್ಟ್ರೀಯ ಪರಮಾಣು ಇಂಧನ ಸಂಸ್ಥೆಯ ಪ್ರಯತ್ನಗಳ ಗಣನೀಯ ಹೆಚ್ಚಳವಾಗಿದೆ. ಉಕ್ರೇನ್ನಲ್ಲಿ ಐಎಇಎ ತಜ್ಞರ ಹೊಸ ತಂಡವನ್ನು ನೇಮಿಸಲಾಗುವುದು ಎಂದು ಐಎಇಎ ಹೇಳಿದೆ.

Similar News