​ಸರಣಿ ಪ್ರಮಾದಗಳ ಬಳಿಕ ರಾಜೀನಾಮೆ ಘೋಷಿಸಿದ ಜರ್ಮನಿಯ ರಕ್ಷಣಾ ಸಚಿವೆ

Update: 2023-01-16 16:57 GMT

ಬರ್ಲಿನ್, ಜ.16: ಸರಣಿ ಪ್ರಮಾದದ ಬಳಿಕ ವ್ಯಾಪಕ ಟೀಕೆ ಎದುರಿಸುತ್ತಿದ್ದ ಜರ್ಮನಿಯ ರಕ್ಷಣಾ ಸಚಿವೆ ಕ್ರಿಸ್ತೀನ್ ಲ್ಯಾಂಬ್ರೆಚ್ ಸೋಮವಾರ ರಾಜೀನಾಮೆ ಘೋಷಿಸಿರುವುದಾಗಿ ವರದಿಯಾಗಿದೆ.

ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಜರ್ಮನಿಯ ಸಶಸ್ತ್ರಪಡೆಗಳನ್ನು ಪುನರುಜ್ಜೀವನಗೊಳಿಸುವ ಅವರ ಸಾಮರ್ಥ್ಯದ ಬಗ್ಗೆ ಹಲವೆಡೆಗಳಿಂದ ಸಂದೇಹ ವ್ಯಕ್ತವಾಗುತ್ತಿದ್ದಂತೆಯೇ ಹೇಳಿಕೆ ನೀಡಿರುವ ಕ್ರಿಸ್ತೀನ್ ಲ್ಯಾಂಬ್ರೆಚ್ ‘ರಕ್ಷಣಾ ಸಚಿವಾಲಯದ ಮುಖ್ಯಸ್ಥರ ಹುದ್ದೆಯಿಂದ ನನ್ನನ್ನು ವಜಾಗೊಳಿಸುವಂತೆ ಛಾನ್ಸಲರ್ರನ್ನು ಕೇಳಿಕೊಂಡಿದ್ದೇನೆ’ ಎಂದಿದ್ದಾರೆ.

ಉಕ್ರೇನ್ಗೆ ನೀಡುತ್ತಿರುವ ಮಿಲಿಟರಿ ನೆರವನ್ನು ಹೆಚ್ಚಿಸುವ ಪ್ರಸ್ತಾವನೆಗೆ ಅನುಮೋದನೆ ನೀಡುವಂತೆ ಜರ್ಮನಿಗೆ ಹೆಚ್ಚಿರುವ ಒತ್ತಡ, ಇತ್ತೀಚೆಗೆ ನಡೆದ ಮಿಲಿಟರಿ ಕವಾಯತಿನ ಸಂದರ್ಭ ಹಲವು ಪ್ಯೂಮಾ ಪದಾತಿ ದಳದ ಟ್ಯಾಂಕ್ಗಳನ್ನು ಸೇವೆಯಿಂದ ಹೊರಗಿರಿಸಿದ ಘಟನೆ, ಜರ್ಮನ್ ಸಶಸ್ತ್ರ ಪಡೆಗಳ ಆಧುನೀಕರಣಕ್ಕೆ 100 ಶತಕೋಟಿ ಯುರೋ ಹಣದ ಅನುದಾನ ಪ್ರಕಟಿಸಿದರೂ ಈ ಕಾರ್ಯದಲ್ಲಿ ವಿಳಂಬ ಮಾಡುತ್ತಿರುವುದು ಸೇರಿದಂತೆ ಕ್ರಿಸ್ತೀನ್ ಸರಣಿ ಟೀಕೆಗೆ ಗುರಿಯಾಗಿದ್ದರು.

ಸಶಸ್ತ್ರ ಪಡೆಗಳ ಸಂಸದೀಯ ಆಯುಕ್ತ ಎವಾ-ಹೊಯೆಗ್, ಸಹಾಯಕ ರಕ್ಷಣಾ ಸಚಿವ ಸೀಮ್ಜೆ ಮೊಯೆಲ್ಲರ್, ಆಡಳಿತಾರೂಢ ಎಸ್ಪಿಡಿ ಪಕ್ಷದ ಮುಖ್ಯಸ್ಥ ಲಾರ್ಸ್ ಕ್ಲಿಂಗ್ಬೆಲ್ ಮತ್ತು ಕಾರ್ಮಿಕ ಸಚಿವ ಹ್ಯೂಬರ್ಟ್ಸ್ ಹೆಯಿಲ್ ಸಂಭಾವ್ಯ ರಕ್ಷಣಾ ಸಚಿವರ ಪಟ್ಟಿಯಲ್ಲಿದ್ದಾರೆ ಎಂದು ಮೂಲಗಳು ಹೇಳಿವೆ.

Similar News