ಕೋಟ್ಯಾಧೀಶರ ಸಂಪತ್ತು ದಿನಕ್ಕೆ 2.7 ಶತಕೋಟಿ ಡಾಲರ್ನಷ್ಟು ಹೆಚ್ಚಳ: ವರದಿ

Update: 2023-01-16 18:24 GMT

ದಾವೋಸ್, ಜ.16: ಕಳೆದ 2 ವರ್ಷದಲ್ಲಿ 1%ದಷ್ಟು ಶ್ರೀಮಂತರು ವಿಶ್ವದ ಇತರ ಜನಸಂಖ್ಯೆಯ ಒಟ್ಟು ಸಂಪತ್ತಿಗಿಂತ ಸುಮಾರು 2 ಪಟ್ಟು ಹೆಚ್ಚು ಸಂಪತ್ತನ್ನು ಗಳಿಸಿದ್ದಾರೆ ಎಂದು ಸೋಮವಾರ ಬಿಡುಗಡೆಗೊಂಡ ಹೊಸ ವರದಿ ಹೇಳಿದೆ.

ಸ್ವಿಝರ್ಲ್ಯಾಂಡ್ನ ದಾವೋಸ್ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಯಲ್ಲಿ ಮಾನವ ಹಕ್ಕುಗಳ ಸಂಸ್ಥೆ 'ಆಕ್ಸಂ' ಈ ವರದಿ ಬಿಡುಗಡೆಗೊಳಿಸಿದೆ. ಹಣದುಬ್ಬರವು ವೇತನವನ್ನು ಮೀರಿಸುತ್ತಿರುವ ದೇಶಗಳಲ್ಲಿ ಈಗ ಕನಿಷ್ಟ 1.7 ಶತಕೋಟಿ ಕಾರ್ಮಿಕರು ವಾಸಿಸುತ್ತಿದ್ದರೂ ಸಹ ಕೋಟ್ಯಾಧೀಶರ ಸಂಪತ್ತು ದಿನಕ್ಕೆ 2.7 ಶತಕೋಟಿ ಡಾಲರ್ನಷ್ಟು ಹೆಚ್ಚುತ್ತಿದೆ . ವಿಶ್ವದ ಶ್ರೀಮಂತರು ಮತ್ತು ಕೋಟ್ಯಾಧೀಶರ ಮೇಲೆ 5%ದಷ್ಟು ತೆರಿಗೆ ವಿಧಿಸಿದರೂ ಅದರಿಂದ ವಾರ್ಷಿಕ 1.7 ಟ್ರಿಲಿಯನ್ ಡಾಲರ್ ಸಂಗ್ರಹಿಸಬಹುದಾಗಿದ್ದು ಇದು 2 ಕೋಟಿ ಜನರನ್ನು ಬಡತನ ರೇಖೆಯಿಂದ ಹೊರತರಲು ಸಾಕಾಗುತ್ತದೆ ಎಂದು ವರದಿ ಹೇಳಿದೆ.

2020ರಿಂದ ಸಂಗ್ರಹಗೊಂಡ 42 ಟ್ರಿಲಿಯನ್ ಡಾಲರ್ ಸಂಪತ್ತಿನಲ್ಲಿ ಸುಮಾರು ಮೂರನೇ ಒಂದರಷ್ಟು ಪ್ರಮಾಣದ ಸಂಪತ್ತನ್ನು 1%ದಷ್ಟಿರುವ ಶ್ರೀಮಂತರು ಬಾಚಿಕೊಂಡಿದ್ದಾರೆ .(1 ಟ್ರಿಲಿಯನ್ ಎಂದರೆ 1 ಲಕ್ಷ ಕೋಟಿಗೆ ಸಮ). 2020ರಿಂದ ಸಾಂಕ್ರಾಮಿಕ ಮತ್ತು ಜೀವನ ವೆಚ್ಚದ ಬಿಕ್ಕಟ್ಟಿನ ವರ್ಷಗಳಲ್ಲಿ , ಹೊಸ ಸಂಪತ್ತಿನ 63%ದಷ್ಟನ್ನು 1%ದಷ್ಟಿರುವ ಶ್ರೀಮಂತರು ವಶಪಡಿಸಿಕೊಂಡಿದ್ದಾರೆ ಎಂದು ' ಶ್ರೀಮಂತರ ಬದುಕುಳಿಯುವಿಕೆ' ಎಂಬ ಶೀರ್ಷಿಕೆಯ ವರದಿ ಹೇಳಿದೆ. ಕಳೆದ ದಶಕದಲ್ಲಿ 1%ದಷ್ಟಿರುವ ಶ್ರೀಮಂತರು ಹೊಸ ಸಂಪತ್ತಿನ 50%ದಷ್ಟನ್ನು ಪಡೆದಿದ್ದಾರೆ. 25 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ತೀವ್ರ ಸಂಪತ್ತು ಮತ್ತು ತೀವ್ರ ಬಡತನ ಏಕಕಾಲದಲ್ಲಿ ಹೆಚ್ಚಿದೆ. ಸಾಮಾನ್ಯ ಜನರು ಆಹಾರದಂತಹ ಅಗತ್ಯ ವಸ್ತುಗಳನ್ನು ತ್ಯಾಗ ಮಾಡಿದರೆ, ಅತಿ ಶ್ರೀಮಂತರು ತಮ್ಮ ಕನಸುಗಳನ್ನು ಈಡೇರಿಸಿಕೊಳ್ಳುತ್ತಿದ್ದಾರೆ. ಅತಿ ಶ್ರೀಮಂತರಿಗೆ ಮತ್ತು ದೊಡ್ಡ ಸಂಸ್ಥೆಗಳಿಗೆ ತೆರಿಗೆ ವಿಧಿಸುವುದು ಈ ಬಿಕ್ಕಟ್ಟಿನಿಂದ ಹೊರಬರುವ ದಾರಿಯಾಗಿದೆ. ಅತೀ ಶ್ರೀಮಂತರಿಗೆ 40 ವರ್ಷಗಳ ತೆರಿಗೆ ಕಡಿತವು 'ಏರುತ್ತಿರುವ ಉಬ್ಬರವಿಳಿತವು ಎಲ್ಲಾ ಹಡಗುಗಳನ್ನು ಮೇಲೆತ್ತುವುದಿಲ್ಲ, ಕೇವಲ ಸೂಪರ್ ಹಡಗುಗಳನ್ನು ಮಾತ್ರ ಮೇಲೆತ್ತುತ್ತದೆ ' ಎಂಬುದನ್ನು ತೋರಿಸಿದೆ ಎಂದು ಆಕ್ಸಂನ ಅಂತರಾಷ್ಟ್ರೀಯ ನಿರ್ದೇಶಕಿ ಗ್ಯಾಬ್ರಿಯೆಲಾ ಬುಚರ್ ಹೇಳಿದ್ದಾರೆ.

Similar News