ಬಾಬರ್‌ ಅಝಂ ವೀಡಿಯೊ ಲೀಕ್‌ ಪ್ರಕರಣ: ʼಇದು ನಕಲಿ, ತಮಾಷೆಗಾಗಿ ಅಪ್ಲೋಡ್‌ ಮಾಡಿದ್ದೆʼ ಎಂದ ಟ್ವಿಟರ್‌ ಬಳಕೆದಾರ

Update: 2023-01-17 16:16 GMT

ಇಸ್ಲಾಮಾಬಾದ್/ಹೊಸದಿಲ್ಲಿ: ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಝಮ್ ಅವರ 'ಸೆಕ್ಸ್ಟಿಂಗ್ ಹಗರಣ' ಕ್ಕೆ ಮಹತ್ವದ ತಿರುವು ಸಿಕ್ಕಿದೆ. ಬಾಬರ್‌ ಅಝಮ್‌ ತನ್ನ ಸಹ ಆಟಗಾರನ ಗೆಳತಿಗೆ ಲೈಂಗಿಕ ವಿಷಯದ ಸಂದೇಶಗಳನ್ನು ಕಳುಹಿಸಿದ್ದಾರೆ ಎಂದು ಆರೋಪಿಸಿದ್ದ ಟ್ವಿಟರ್‌ ಖಾತೆದಾರರೇ ತಾನು ಮೋಜಿಗಾಗಿ ಈ ಟ್ವೀಟ್‌ ಮಾಡಿದ್ದೆ, ಇದಕ್ಕೆ ಯಾವುದೇ ಆಧಾರ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ ಎಂದು news18.com ವರದಿ ಮಾಡಿದೆ.

ಅಝಮ್‌ ಕುರಿತು ಟ್ವೀಟ್‌ ಮಾಡಿದ್ದ ಟ್ವಿಟರ್‌ ಖಾತೆಯೇ ಒಂದು ವಿಡಂಬನಾತ್ಮಕ ಖಾತೆಯಾಗಿದ್ದು, ಇದು ನೀರವ್‌ ಮೋದಿ ಹೆಸರಿನಲ್ಲಿ ಕಾರ್ಯಾಚರಿಸುತ್ತಿದೆ.   

ಈ ಖಾತೆಯಲ್ಲಿ ಇತ್ತೀಚೆಗೆ "ಬಾಬರ್ ಆಜಮ್ ಮತ್ತೊಬ್ಬ ಪಾಕಿಸ್ತಾನಿ ಕ್ರಿಕೆಟಿಗನ ಗೆಳತಿಯೊಂದಿಗೆ ಸೆಕ್ಸ್‌ಟಿಂಗ್ ಮಾಡಿದ್ದಾರೆ. ಹಾಗೂ ಆಕೆ ಬಾಬರ್‌ನೊಂದಿಗೆ ಲೈಂಗಿಕ ವಿಷಯಗಳ ಸಂವಾದದಲ್ಲಿ ಮುಂದುವರೆದರೆ ಆಕೆಯ ಗೆಳೆಯನನ್ನು ತಂಡದಲ್ಲಿ ಹೊರಕ್ಕೆ ಹಾಕದಂತೆ ಭರವಸೆ ನೀಡಿದ್ದಾನೆ. ಅಲ್ಲಾ ಇದನ್ನೆಲ್ಲ ನೋಡುತ್ತಿದ್ದಾನೆ ಎಂದು ನಾನು ಭಾವಿಸುತ್ತೇನೆ" ಎಂದು ವಿಡಂಬನಾತ್ಮಕ ಟ್ವೀಟ್ ಮಾಡಲಾಗಿತ್ತು.

 ಇದನ್ನೇ ಆಧರಿಸಿ ಹಲವು ವಿರೋಧಿಗಳು ಬಾಬರ್‌ ವಿರುದ್ಧ ಮುಗಿಬಿದ್ದಿದ್ದರು. ಕೆಲವು ಮಾಧ್ಯಮಗಳೂ ಇದನ್ನೇ ಆಧರಿಸಿ ಸುದ್ದಿ ಬಿತ್ತರಿಸಿದ್ದವು.

"ನಮ್ಮದು ಎಂತಹ ವಿದೂಷಕ ಮಾಧ್ಯಮ,   ನನ್ನ ವಿಡಂಬನಾತ್ಮಕ ಟ್ವೀಟ್‌ನ ಆಧಾರದ ಮೇಲೆ ಮಿರರ್‌ ನೌ ಚಾನೆಲ್ ‌  ಕಾರ್ಯಕ್ರಮವನ್ನು ಪ್ರಸಾರ ಮಾಡಿದೆ ಮತ್ತು (ನನ್ನ) ಸುದ್ದಿಯ ಮೂಲವನ್ನು ಪರಿಶೀಲಿಸದೆ ಬಾಬರ್ ಅಝಮ್ ಮೇಲೆ ಅಸಹ್ಯ ಆರೋಪಗಳನ್ನು ಮಾಡಿದೆ" ಎಂದುಡಾ. ನೀರವ್‌ ಮೋದಿ ಹೆಸರಿನ ಟ್ವಿಟರ್‌ ಖಾತೆ ಟ್ವೀಟ್‌ ಮಾಡಿದೆ.  ಅಲ್ಲದೆ, ನಾನು ತಮಾಷೆಗೆ ಮಾಡಿದ ಟ್ವೀಟ್‌ ಅನ್ನು ಆಧರಿಸಿ ಕಾರ್ಯಕ್ರಮ ಪ್ರಸಾರಮಾಡಲಾಗಿದೆ. ಬಾಬರ್‌ ಅಝಮ್‌ ಬಳಿ ನಾನು ಕ್ಷಮೆ ಕೋರುತ್ತೇನೆ ಎಂದು ಟ್ವಿಟರ್‌ ಬಳಕೆದಾರ ಬರೆದಿದ್ದಾರೆ.

“ಇಂತಹ ಮೂರ್ಖ ಪತ್ರಕರ್ತರನ್ನು ಇದುವರೆಗೆ ನೋಡಿಲ್ಲ, ಇದು ಭಾರತೀಯ ಮಾಧ್ಯಮಗಳು ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಬಾಬರ್ ವಿರುದ್ಧ ನಡೆಸುತ್ತಿರುವ ಅಪಪ್ರಚಾರವಾಗಿದೆ” ಎಂದು ಅವರು ಬರೆದಿದ್ದಾರೆ.

“ನನ್ನ ಮೂಲ ಟ್ವೀಟ್ ಬಾಲಿವುಡ್ ಚಲನಚಿತ್ರ ಶೋಲೆಯ ದೃಶ್ಯವನ್ನು ಆಧರಿಸಿದೆ, ಅದನ್ನು ನೋಡಿ. ನಿಮಗೆ ಹಿನ್ನೆಲೆಯ ಅರಿವಾಗುತ್ತದೆ” ಎಂದು ಮತ್ತೊಂದು ಟ್ವೀಟ್‌ ನಲ್ಲಿ ಅವರು ತಿಳಿಸಿದ್ದಾರೆ.

Similar News