ಪಾಕ್ ಮೂಲದ ಉಗ್ರನನ್ನು ಕಪ್ಪುಪಟ್ಟಿಗೆ ಸೇರಿಸಿದ ವಿಶ್ವಸಂಸ್ಥೆ: ಆಕ್ಷೇಪಣೆ ಹಿಂಪಡೆದ ಚೀನಾ

Update: 2023-01-17 17:50 GMT

ವಿಶ್ವಸಂಸ್ಥೆ, ಜ.17: ಪಾಕಿಸ್ತಾನ ಮೂಲದ ಲಷ್ಕರೆ ತೈಯಬ್ಬ (ಎಲ್ಇಟಿ)ಸಂಘಟನೆಯ ಮುಖಂಡ ಅಬ್ದುಲ್ ರೆಹ್ಮಾನ್ ಮಕ್ಕಿಯನ್ನು ವಿಶ್ವಸಂಸ್ಥೆ ಜಾಗತಿಕ ಭಯೋತ್ಪಾದಕರ ಪಟ್ಟಿಗೆ ಸೇರ್ಪಡೆಗೊಳಿಸಿದೆ.ಭಯೋತ್ಪಾದಕರ ಪಟ್ಟಿ ಜಾಗತಿಕ ಭಯೋತ್ಪಾದನಾ ನಿಗ್ರಹ ಸಹಕಾರವನ್ನು ಹೆಚ್ಚಿಸಲು ಅನುಕೂಲಕರವಾಗಿದೆ. ಭಯೋತ್ಪಾದನಾ ನಿಗ್ರಹ ಕ್ರಮಗಳಿಗೆ ಪಾಕಿಸ್ತಾನ ನೀಡಿದ ಬೆಂಬಲ ಶ್ಲಾಘನೀಯ ಎಂದು ವಿಶ್ವಸಂಸ್ಥೆ ಹೇಳಿದೆ.

ಎಲ್ಇಟಿ ಮುಖಂಡ ಮಕ್ಕಿಯನ್ನು ಜಾಗತಿಕ ಭಯೋತ್ಪಾದಕರ ಪಟ್ಟಿಗೆ ಸೇರಿಸುವ ಭಾರತ ಮತ್ತು ಅಮೆರಿಕದ ಜಂಟಿ ಪ್ರಸ್ತಾವನೆ ವಿರುದ್ಧದ ತಡೆಯನ್ನು ಚೀನಾ ಹಿಂಪಡೆದ ಬೆನ್ನಲ್ಲೇ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 1267 ಅಲ್ಖೈದಾ ಮತ್ತು ಐಸಿಸ್ ನಿರ್ಬಂಧ ಸಮಿತಿಯು ಈ ನಿರ್ಣಯ ಕೈಗೊಂಡಿದೆ. ಈ ಮೂಲಕ ಮಕ್ಕಿ ವಿರುದ್ಧ ಪ್ರಯಾಣ, ಶಸ್ತ್ರಾಸ್ತ್ರ ನಿರ್ಬಂಧ ಹೇರಿಕೆ ಜತೆಗೆ ಆಸ್ತಿಯನ್ನೂ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಮಕ್ಕಿ ಮತ್ತು ಇತರ ಉಗ್ರರು ಭಯೋತ್ಪಾದನಾ ಕೃತ್ಯಗಳಿಗೆ ಹಣ ಸಂಗ್ರಹ, ಯುವಕರ ನೇಮಕ ಮತ್ತು ಭಾರತದಲ್ಲಿ ದಾಳಿಗೆ ಸಂಚು ಹೂಡಿದ್ದರು ಎಂದು ನಿರ್ಬಂಧ ಸಮಿತಿ ಹೇಳಿದೆ.

ಮುಂಬೈ ದಾಳಿಯ ಸೂತ್ರಧಾರ, ಜೆಯುಡಿ ಸಂಘಟನೆಯ ಮುಖ್ಯಸ್ಥ ಹಫೀರ್ ಸಯೀದ್ನ ಸೋದರ ಮಾವನಾಗಿರುವ 68 ವರ್ಷದ ಮಕ್ಕಿಯನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸುವ ಜಂಟಿ ಪ್ರಸ್ತಾವನೆಗೆ 2022ರ ಜೂನ್ 16ರಂದು ಚೀನಾ ತಡೆನೀಡಿತ್ತು. ಭಯೋತ್ಪಾದನೆಯು ಮನುಕುಲದ ಸಾಮಾನ್ಯ ಶತ್ರುವಾಗಿದೆ. ವಿಶ್ವಸಂಸ್ಥೆಯ ಜಾಗತಿಕ ಭಯೋತ್ಪಾದಕರ ಪಟ್ಟಿಯಲ್ಲಿ ಸೇರ್ಪಡೆಗೊಂಡ ವ್ಯಕ್ತಿಗಳನ್ನು ಪಾಕಿಸ್ತಾನ ಶಿಕ್ಷಿಸಿದೆ ಎಂಬುದು ಭಯೋತ್ಪಾದನೆಯ ವಿರುದ್ಧದ ಪಾಕಿಸ್ತಾನದ ದೃಢನಿಲುವಿಗೆ ದ್ಯೋತಕವಾಗಿದೆ ಎಂದು ಚೀನಾದ ವಿದೇಶಾಂಗ ಇಲಾಖೆ ವಕ್ತಾರ ವಾಂಗ್ ವೆನ್ಬಿನ್ ಹೇಳಿದ್ದಾರೆ.

ಪಾಕಿಸ್ತಾನದ ಪಂಜಾಬ್ ಪ್ರಾಂತದಲ್ಲಿ ಜನಿಸಿದ ಅಬ್ದುಲ್ ರೆಹ್ಮಾನ್ ಮಕ್ಕಿ ಎಲ್ಇಟಿಯ ಉಪಮುಖ್ಯಸ್ಥನಾಗಿ ಗುರುತಿಸಿಕೊಂಡಿದ್ದ. ಈತನನ್ನು 2019ರ ಮೇ 15ರಂದು ಬಂಧಿಸಿದ್ದ ಪಾಕಿಸ್ತಾನ ಲಾಹೋರ್ನಲ್ಲಿ ಗೃಹಬಂಧನದಲ್ಲಿ ಇರಿಸಿತ್ತು. 2020ರಲ್ಲಿ ಭಯೋತ್ಪಾದನೆಗೆ ಆರ್ಥಿಕ ನೆರವು ನೀಡುತ್ತಿದ್ದ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಜೈಲುಶಿಕ್ಷೆ ವಿಧಿಸಲಾಗಿತ್ತು.

Similar News