×
Ad

ಸ್ಥಿರತೆಯ ಹಳಿಗೆ ಮರಳಲು ಭಾರತದ ನೆರವು: ಶ್ರೀಲಂಕಾ ಶ್ಲಾಘನೆ

Update: 2023-01-20 23:21 IST

ಕೊಲಂಬೊ, ಜ.20: ಕಳೆದ ವರ್ಷ 3.9 ಶತಕೋಟಿ ಡಾಲರ್ ಮೊತ್ತದ ಆವರ್ತ ಸಾಲ ಒದಗಿಸಿರುವ ಜತೆಗೆ ಐಎಂಎಫ್ನಿಂದ ಸಾಲ ಪಡೆಯಲು ನೆರವಾಗುವ ಮೂಲಕ ಭಾರತ ಆಪತ್ಕಾಲಕ್ಕೆ ನಮ್ಮ ನೆರವಿಗೆ ಧಾವಿಸಿದೆ. ಸ್ಥಿರತೆಯ ಹಳಿಗೆ ನಾವು ಮರಳುವಲ್ಲಿ, ಅಗತ್ಯದ ವಸ್ತುಗಳ ಆಮದಿನಲ್ಲಿ ಭಾರತದ ಸಕಾಲಿಕ ನೆರವು ಪ್ರಮುಖವಾಗಿದೆ. ಕಾಳಜಿ ಮತ್ತು ವಿವೇಚನೆಯುಳ್ಳ ಮಿತ್ರರನ್ನು ಹೊಂದಿರುವುದು ನಮ್ಮ ಅದೃಷ್ಟವಾಗಿದೆ ಎಂದು ಶ್ರೀಲಂಕಾ ಶುಕ್ರವಾರ ಅಭಿನಂದನೆ ಸಲ್ಲಿಸಿದೆ.

ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ದ್ವೀಪರಾಷ್ಟ್ರಕ್ಕೆ ತಾನು ನೀಡಿರುವ ಸಾಲವನ್ನು ಪುನರ್ರಚಿಸುವುದಾಗಿ ಭಾರತವು ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ(ಐಎಂಎಫ್)ಗೆ ಭರವಸೆ ನೀಡಿರುವುದು ಶ್ರೀಲಂಕಾಕ್ಕೆ ಐಎಂಎಫ್ ಸಾಲ ಪಡೆಯಲು ಪೂರಕವಾಗಿದೆ. ಅಲ್ಲದೆ ಶ್ರೀಲಂಕಾದ ಅರ್ಥವ್ಯವಸ್ಥೆಯ ಚೇತರಿಕೆಗೆ ಆ ದೇಶದಲ್ಲಿ ಹೂಡಿಕೆ ಹೆಚ್ಚಿಸುವುದಾಗಿ ಭಾರತ ಭರವಸೆ ನೀಡಿದೆ.

ಶ್ರೀಲಂಕಾಕ್ಕೆ 2 ದಿನಗಳ ಭೇಟಿ ನೀಡಿರುವ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಗುರುವಾರ ಶ್ರೀಲಂಕಾದ ವಿದೇಶಾಂಗ ಸಚಿವ ಆಲಿ ಸಾಬ್ರಿ ಮತ್ತು ಅಧ್ಯಕ್ಷ ರನಿಲ್ ವಿಕ್ರಮಸಿಂಘೆಯನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಜತೆ ಗುರುವಾರ ನಡೆಸಿದ ಮಾತುಕತೆ ಅತ್ಯಂತ ಫಲಪ್ರದವಾಗಿತ್ತು. ದ್ವಿಪಕ್ಷೀಯ ಬಾಂಧವ್ಯ ಸುಧಾರಣೆ, ಜನರಿಂದ ಜನರ ಸಂಪರ್ಕಗಳು, ವ್ಯಾಪಾರ ಮತ್ತು ಹೂಡಿಕೆ ಸಂಬಂಧ ಸುಧಾರಣೆಯ ಜತೆ ಮಾತುಕತೆ ನಡೆಸಿದ್ದೇವೆ ಎಂದು ಅಲಿ ಸಬ್ರಿ ಟ್ವೀಟ್ ಮಾಡಿದ್ದಾರೆ.

2 ದೇಶಗಳ ಪ್ರವಾಸದ ಅಂಗವಾಗಿ ಮಾಲ್ದೀವ್ಸ್ನಿಂದ ಶ್ರೀಲಂಕಾಕ್ಕೆ ಆಗಮಿಸಿರುವ ವಿದೇಶಾಂಗ ಸಚಿವ ಎಸ್. ಜೈಶಂಕರ್ ‘ಶ್ರೀಲಂಕಾದ ಸಚಿವರ ಜತೆ ಪರಸ್ಪರ ಮತ್ತು ಪ್ರಾದೇಶಿಕ ಹಿತಾಸಕ್ತಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚೆ ನಡೆದಿದೆ. ಮೂಲ ಸೌಕರ್ಯ, ಸಂಪರ್ಕ, ಇಂಧನ, ಕೈಗಾರಿಕೆ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಸಂಬಂಧ ಸುಧಾರಣೆಗೆ ಚರ್ಚೆ ನಡೆಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
 

ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ(ಐಎಂಎಫ್)ಯಿಂದ 2.9 ಶತಕೋಟಿ ತುರ್ತು ಸಾಲ ಪಡೆಯಲು ಶ್ರೀಲಂಕಾ ಪ್ರಯತ್ನಿಸುತ್ತಿದೆ. ಆದರೆ ಸಾಲ ಮಂಜೂರಾತಿಗೆ ಐಎಂಎಫ್ ಕೆಲವೊಂದು ಷರತ್ತುಗಳನ್ನು ಮುಂದಿರಿಸಿದೆ. ಶ್ರೀಲಂಕಾವು ತನ್ನ ಪ್ರಮುಖ ಸಾಲಗಾರ(ಸಾಲ ನೀಡಿದ ದೇಶಗಳು)ರಾದ ಚೀನಾ, ಜಪಾನ್ ಮತ್ತು ಭಾರತದಿಂದ ಆರ್ಥಿಕ ಭರವಸೆ ಒದಗಿಸಬೇಕು ಎಂಬ ಷರತ್ತು ಇದರಲ್ಲಿ ಮುಖ್ಯವಾಗಿದೆ. ಭಾರತ ಈಗಾಗಲೇ ಈ ಭರವಸೆ ಒದಗಿಸಿದೆ. ಸಾಲ ಪುನರ್ರಚನೆಗೆ ಭಾರತದೊಂದಿಗಿನ ಮಾತುಕತೆ ಯಶಸ್ವಿಯಾಗಿದೆ ಎಂದು ಕಳೆದ ಮಂಗಳವಾರ ಶ್ರೀಲಂಕಾ ಅಧ್ಯಕ್ಷ ವಿಕ್ರಮಸಿಂಘೆ ಸಂಸತ್ತಿಗೆ ಮಾಹಿತಿ ನೀಡಿದ್ದರು. ಈ ಮಧ್ಯೆ, ಸಾಲ ಪುನರ್ರಚನೆಯ ವಿಷಯದಲ್ಲಿ ಭಾರತವು ಶ್ರೀಲಂಕಾಕ್ಕೆ ಎಲ್ಲಾ ನೆರವು ನೀಡುವುದಾಗಿ ವಿತ್ತಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ರಜತ್ ಕುಮಾರ್ ಮಿಶ್ರ ಐಎಂಎಫ್ ಮುಖ್ಯಸ್ಥೆ ಕ್ರಿಸ್ತಲಿನಾ ಜಾರ್ಜಿಯೆವಾಗೆ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.

Similar News