ಕಾರಿನಲ್ಲಿ ಪ್ರಯಾಣಿಸುವಾಗ ಸೀಟ್ ಬೆಲ್ಟ್ ಧರಿಸದ ಬ್ರಿಟನ್ ಪ್ರಧಾನಿಗೆ ದಂಡ ವಿಧಿಸಿದ ಪೊಲೀಸರು

Update: 2023-01-21 08:48 GMT

ಲಂಡನ್: ಕಾರಿನಲ್ಲಿ ಪ್ರಯಾಣಿಸುತ್ತಿರುವಾಗ ಸೀಟ್ ಬೆಲ್ಟ್ ಧರಿಸದೆ ಕಾನೂನು ಉಲ್ಲಂಘಿಸಿ, ಸಾಮಾಜಿಕ ಮಾಧ್ಯಮಕ್ಕಾಗಿ ವಿಡಿಯೊ ಚಿತ್ರೀಕರಣ ನಡೆಸಿದ ತಪ್ಪಿಗಾಗಿ ಬ್ರಿಟನ್ ಪ್ರಧಾನಿ ರಿಷಿ ಸುನಕ್ (Rishi Sunak) ಅವರಿಗೆ ಬ್ರಿಟನ್ ಪೊಲೀಸ್ ಪಡೆಯು ದಂಡ ವಿಧಿಸಿದೆ.

ಈ ಪ್ರಕರಣದ ಕುರಿತು ಪರಿಶೀಲಿಸುವುದಾಗಿ ತಿಳಿಸಿದ್ದ ಲ್ಯಾಂಕಷೈರ್ ಪೊಲೀಸರು, ಸುನಕ್ ಅವರಿಗೆ ನಿಗದಿತ ದಂಡದ ನೋಟಿಸ್ ಜಾರಿಗೊಳಿಸಲಾಗಿದ್ದು, ಚಾಲನೆಯಲ್ಲಿದ್ದ ಕಾರಿನಲ್ಲಿ ಸೀಟ್ ಬೆಲ್ಟ್ ಧರಿಸದೆ ಪ್ರಯಾಣಿಸಿದ್ದಕ್ಕಾಗಿ 100 ಪೌಂಡ್ ದಂಡ ವಿಧಿಸಲಾಗಿದೆ ಎಂದು ದೃಢಪಡಿಸಿದ್ದಾರೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಲ್ಯಾಂಕಷೈರ್ ಪೊಲೀಸರು, "ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ವಿಡಿಯೊವನ್ನು ಆಧರಿಸಿ, ಚಾಲನೆಯಲ್ಲಿರುವ ಕಾರಿನಲ್ಲಿ ಪ್ರಯಾಣಿಸುವಾಗ ವ್ಯಕ್ತಿಯೊಬ್ಬರು ಸೀಟ್ ಬೆಲ್ಟ್ ಧರಿಸಲು ವಿಫಲವಾಗಿರುವುದರಿಂದ, ಜನವರಿ 20ರಂದು ಲಂಡನ್‌ನ 42 ವರ್ಷ ವಯೋಮಾನದ ವ್ಯಕ್ತಿಯೊಬ್ಬರಿಗೆ ನಿಗದಿತ ದಂಡವನ್ನು ಪಾವತಿಸುವಂತೆ ಷರತ್ತುಬದ್ಧ ನೋಟಿಸ್ ಜಾರಿ ಮಾಡಲಾಗಿದೆ" ಎಂದು ತಿಳಿಸಿದ್ದಾರೆ.

ವಾಯುವ್ಯ ಇಂಗ್ಲೆಂಡ್‌ನಲ್ಲಿ ಕಾರು ಚಲಾಯಿಸುವಾಗ ವಿಡಿಯೊ ಚಿತ್ರೀಕರಿಸಲು ಸೀಟ್ ಬೆಲ್ಟ್ ತೆಗೆದು, ನ್ಯಾಯದ ಲಘು ಉಲ್ಲಂಘನೆ ಮಾಡಿದ್ದಕ್ಕಾಗಿ ಸುನಕ್ ಕ್ಷಮೆ ಯಾಚಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಸುನಕ್ ವಕ್ತಾರರು, "ಅದು ನ್ಯಾಯದ ಲಘು ಉಲ್ಲಂಘನೆಯಾಗಿತ್ತು. ಪ್ರಧಾನಿಗಳು ಸಣ್ಣ ತುಣುಕನ್ನು ಚಿತ್ರೀಕರಿಸಲು ಸೀಟ್ ಬಿಲ್ಟ್ ತೆಗೆದಿದ್ದರು. ಅದು ತಪ್ಪಾಗಿತ್ತು ಎಂದು ಅವರು ಸಂಪೂರ್ಣವಾಗಿ ಒಪ್ಪಿಕೊಂಡಿದ್ದು, ಅದಕ್ಕಾಗಿ ಕ್ಷಮೆ ಯಾಚಿಸಿದ್ದಾರೆ" ಎಂದು ಹೇಳಿದ್ದಾರೆ.

ಪ್ರಧಾನಿ ರಿಷಿ ಸುನಕ್ ಅವರ ನಡೆಯನ್ನು ಟೀಕಿಸಿರುವ ಲಿಬರಲ್ ಡೆಮೊಕ್ರಾಟ್ ಪಕ್ಷದ ಉಪ ನಾಯಕಿ ಡೈಸಿ ಕೂಪರ್, "ಪ್ರಧಾನಿ ಯಾವಾಗಲೂ ಖಾಸಗಿ ವಿಮಾನಗಳಲ್ಲಿ ಹಾರಾಡುವುದರಿಂದ, ಕಾರಿನಲ್ಲಿ ಸೀಟ್ ಬೆಲ್ಟ್ ಧರಿಸುವುದನ್ನು ಮರೆತಿರಬಹುದು" ಎಂದು ವ್ಯಂಗ್ಯವಾಡಿದ್ದಾರೆ.

ಅಪಘಾತ ತಡೆಗಾಗಿ ಕಾರ್ಯನಿರ್ವಹಿಸುತ್ತಿರುವ ಬ್ರಿಟನ್‌ನ ರಾಯಲ್ ಸೊಸೈಟಿಯು, "ವ್ಯಕ್ತಿಗಳು ಯಾರೇ ಆಗಿರಲಿ, ಎಲ್ಲಿನವರೇ ಆಗಿರಲಿ, ಸೀಟ್ ಬೆಲ್ಟ್ ಕಾನೂನನ್ನು ಗಂಭೀರವಾಗಿ ಪರಿಗಣಿಸಬೇಕು" ಎಂದು ಅಭಿಪ್ರಾಯ ಪಟ್ಟಿದೆ.

ಬ್ರಿಟನ್‌ನಲ್ಲಿ ಕೆಲವು ವಿನಾಯಿತಿ ಸಂದರ್ಭಗಳನ್ನು ಹೊರತುಪಡಿಸಿ, ಕಾರಿನಲ್ಲಿ ಪ್ರಯಾಣಿಸುವವರು ಸೀಟ್ ಬೆಲ್ಟ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ಇದನ್ನೂ ಓದಿ: ಕುಸ್ತಿಪಟುಗಳ ಬೇಡಿಕೆಗಳನ್ನು ಈಡೇರಿಸುವುದಾಗಿ ಕೇಂದ್ರ ಸರ್ಕಾರ ಭರವಸೆ: ಧರಣಿ ಅಂತ್ಯ

Similar News