×
Ad

ಕಿರುಕುಳ ಆರೋಪ ನಾಟಕ ಎಂದ ಬಿಜೆಪಿಗೆ ತಿರುಗೇಟು ನೀಡಿದ ದಿಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್

Update: 2023-01-21 13:28 IST

ಹೊಸದಿಲ್ಲಿ: ಏಮ್ಸ್ ಆಸ್ಪತ್ರೆಯ ಹೊರಗೆ ಪಾನಮತ್ತ ವ್ಯಕ್ತಿಯೊಬ್ಬನ ಕಾರಿನ  ಕಿಟಕಿಯಲ್ಲಿ ತನ್ನ ಕೈ ಸಿಕ್ಕಿಹಾಕಿಕೊಂಡಿದ್ದರಿಂದ ತನಗೆ ಕಿರುಕುಳ ನೀಡಿ ಎಳೆದೊಯ್ದಿದ್ದಾನೆ ಎಂದು ದಿಲ್ಲಿ ಮಹಿಳಾ ಆಯೋಗದ (DCW) ಅಧ್ಯಕ್ಷೆ ಸ್ವಾತಿ ಮಲಿವಾಲ್ (Swati Maliwal) ಗುರುವಾರ ಆರೋಪಿಸಿದ್ದರು. ಈ ಆರೋಪವನ್ನು ತಳ್ಳಿ ಹಾಕಿರುವ ಬಿಜೆಪಿ (BJP), ದಿಲ್ಲಿ ಪೊಲೀಸರನ್ನು ಕೆಟ್ಟದಾಗಿ ಬಿಂಬಿಸಲು ಹೀಗೆ ಮಾಡಲಾಗಿದೆ ಎಂದು ಹೇಳಿದೆ. 

ಬಿಜೆಪಿ ಕೆಟ್ಟ ಸುಳ್ಳು ಹೇಳುತ್ತಿದೆ ಎಂದು ಆರೋಪಿಸಿರುವ ಸ್ವಾತಿ ಈ ಕುರಿತು ಭಾವುಕ ಟ್ವೀಟ್ ಮಾಡಿದ್ದಾರೆ. 

"ನನ್ನ ಬಗ್ಗೆ ಹಸಿ ಸುಳ್ಳು ಹೇಳಿ ನನ್ನನ್ನು ಹೆದರಿಸಬಹುದು ಎಂದು ಭಾವಿಸುವವರಿಗೆ ನಾನು ಹೇಳುತ್ತೇನೆ, ನಾನು ಈ ಸಣ್ಣ ಜೀವನದಲ್ಲಿ ಅನೇಕ ದೊಡ್ಡ ಕೆಲಸಗಳನ್ನು ಮಾಡಿದ್ದೇನೆ, ನನ್ನ ಮೇಲೆ ಅನೇಕ ಬಾರಿ ದಾಳಿ ಮಾಡಿದರೂ ನಿಲ್ಲಲಿಲ್ಲ. ಕ್ರೌರ್ಯವು  ನನ್ನೊಳಗಿನ ಬೆಂಕಿ ಹೆಚ್ಚಿಸಿದೆ, ನನ್ನ ಧ್ವನಿಯನ್ನು ಹತ್ತಿಕ್ಕಲು ಯಾರಿಗೂ  ಸಾಧ್ಯವಿಲ್ಲ, ನಾನು ಬದುಕಿರುವವರೆಗೂ ಹೋರಾಡುತ್ತಲೇ ಇರುತ್ತೇನೆ’’ ಎಂದು ಮಲಿವಾಲ್ ಟ್ವೀಟಿಸಿದ್ದಾರೆ.

ಮಲಿವಾಲ್ ಅವರ ಕಿರುಕುಳದ ಆರೋಪವನ್ನು ಪ್ರಶ್ನಿಸಿದ ಬಿಜೆಪಿ,  ಅವರು ಆರೋಪಿಸಿದ ವ್ಯಕ್ತಿ ಎಎಪಿ ಸದಸ್ಯ ಹಾಗೂ  ಅವರ "ನಾಟಕ"ವು ಪಿತೂರಿಯ ಭಾಗವಾಗಿದೆ, ಅದು ಈಗ "ಬಹಿರಂಗವಾಗಿದೆ" ಎಂದು ಹೇಳಿದೆ.

ಮಲಿವಾಲ್ ಅವರಿಗೆ ಕಿರುಕುಳ ನೀಡಿದ ಆರೋಪ ಹೊತ್ತಿರುವ 47 ವರ್ಷದ ಹರೀಶ್ ಚಂದ್ರ ಸೂರ್ಯವಂಶಿ ಅವರು ದಕ್ಷಿಣ ದಿಲ್ಲಿಯ ಸಂಗಮ್ ವಿಹಾರ್ ನಲ್ಲಿ  ಪ್ರಮುಖ ಎಎಪಿ ಕಾರ್ಯಕರ್ತರಾಗಿದ್ದಾರೆ ಎಂದು ದಿಲ್ಲಿ ಬಿಜೆಪಿ ಕಾರ್ಯಾಧ್ಯಕ್ಷ ವೀರೇಂದ್ರ ಸಚ್ ದೇವ್ ಆರೋಪಿಸಿದ್ದಾರೆ.

ಎಎಪಿ ಶಾಸಕ ಪ್ರಕಾಶ್ ಜರ್ವಾಲ್ ಅವರೊಂದಿಗೆ ಆರೋಪಿ  ಹರೀಶ್ ಪ್ರಚಾರ ಮಾಡುತ್ತಿರುವ ಫೋಟೋವನ್ನು ಬಿಡುಗಡೆ ಮಾಡಿರುವ ಸಚ್ ದೇವ್, "ಮಲಿವಾಲ್ ಹೇಳುತ್ತಿರುವ ಈ ಘಟನೆಯು ದಿಲ್ಲಿಯನ್ನು ಮಹಿಳೆಯರಿಗೆ ಅಸುರಕ್ಷಿತ ನಗರ ಎಂದು ತೋರಿಸುವ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ದಿಲ್ಲಿಯನ್ನು ದೂಷಿಸಲು ಎಎಪಿ ನಡೆಸುತ್ತಿರುವ ಪಿತೂರಿಯಾಗಿದೆ ಎಂಬುದು ಸ್ಪಷ್ಟವಾಗಿದೆ" ಎಂದು ಹೇಳಿದರು.

ಎಎಪಿಯಿಂದ ನೇಮಕಗೊಂಡಿರುವ ಸ್ವಾತಿ  ಮಲಿವಾಲ್ ಅವರು ದಿಲ್ಲಿ ಪೊಲೀಸರ ಮನೋಸ್ಥೈರ್ಯವನ್ನು ಕುಗ್ಗಿಸಲು ಹಾಗೂ  ಕೇಂದ್ರದ ಮೇಲೆ ದಾಳಿ ನಡೆಸಲು ಈ ಘಟನೆಯನ್ನು ಸೃಷ್ಟಿಸಿದ್ದಾರೆ ಎಂದು ಹಲವಾರು ಬಿಜೆಪಿ ನಾಯಕರು ಆರೋಪಿಸಿದ್ದಾರೆ.

ಇದನ್ನೂ ಓದಿ: ನಕಲಿ ದಾಖಲೆ ಸೃಷ್ಟಿಸಿ ಶಾಸಕನ ನಿವೇಶನವನ್ನೇ ನೋಂದಣಿ ಮಾಡಿಕೊಂಡ ವಂಚಕರು!

Similar News