ಜಪಾನ್ ನಲ್ಲಿ ಜನಸಂಖ್ಯಾ ಕುಸಿತ: ʼಇಂದಲ್ಲದಿದ್ದರೆ ಮತ್ತೆಂದೂ ಸಾಧ್ಯವಿಲ್ಲವೆಂದʼ ಜಪಾನ್ ಪ್ರಧಾನಿ

Update: 2023-01-25 09:16 GMT

ಟೋಕಿಯೋ: ಜಪಾನ್‌ನ ಕುಸಿಯುತ್ತಿರುವ ಜನಸಂಖ್ಯೆಯ ಕುರಿತು ಸೋಮವಾರ ಎಚ್ಚರಿಕೆ ನೀಡಿರುವ ಜಪಾನ್ ಪ್ರಧಾನಿ ಫೂಮಿಯೊ ಕಿಶಿದಾ, "ಈಗಿನ ಜನಸಂಖ್ಯಾ ಪ್ರಮಾಣವು ಸಾಮಾಜಿಕ ಕಾರ್ಯನಿರ್ವಹಣೆಗೆ ಸಾಕಾಗದ ಸ್ಥಿತಿಗೆ ತಲುಪುತ್ತಿದೆ" ಎಂದು ಆತಂಕ ವ್ಯಕ್ತಪಡಿಸಿದ್ದಾರೆ ಎಂದು CNN ಸುದ್ದಿ ಸಂಸ್ಥೆ ವರದಿ ಮಾಡಿದೆ.

ಜನಪ್ರತಿನಿಧಿಗಳಿಗೆ ಏರ್ಪಡಿಸಲಾಗಿದ್ದ ನೀತಿ ನಿರೂಪಣೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಫೂಮಿಯೊ ಕಿಶಿದಾ, "ಜನಸಂಖ್ಯೆಯ ಕುಸಿತವು "ಇಂದಲ್ಲದಿದ್ದರೆ ಮತ್ತೆಂದೂ ಸಾಧ್ಯವಿಲ್ಲ" ಎಂಬಂತಹ ಪ್ರಕರಣವಾಗಿದ್ದು, ಇನ್ನಷ್ಟು ದೀರ್ಘಕಾಲ ಕಾಯುತ್ತಾ ಕೂರಲು ಸಾಧ್ಯವಿಲ್ಲ" ಎಂದು ಎಚ್ಚರಿಕೆ ನೀಡಿದ್ದಾರೆ.

"ದೇಶದ ಆರ್ಥಿಕತೆ ಮತ್ತು ಸಮಾಜವು ಸುಸ್ಥಿರ ಮತ್ತು ಒಳಗೊಳ್ಳುವಿಕೆ ಅಳವಡಿಸಿಕೊಳ್ಳಲು ಮಕ್ಕಳು ಹೊಂದಲು ನೆರವು ನೀಡುವುದನ್ನು ನಮ್ಮ ಬಹು ಮುಖ್ಯ ನೀತಿಯನ್ನಾಗಿಸಿಕೊಂಡಿದ್ದೇವೆ" ಎಂದು ಅವರು ಹೇಳಿದ್ದಾರೆ.

ಮಕ್ಕಳಿಗೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ವ್ಯಯಿಸುವ ಮೊತ್ತವನ್ನು ನಮ್ಮ ಸರ್ಕಾರ ದುಪ್ಪಟ್ಟುಗೊಳಿಸಲು ಬಯಸಿದ್ದು, ಈ ಸಮಸ್ಯೆ ಕುರಿತು ಗಮನ ಹರಿಸಲು ನೂತನ ಸರ್ಕಾರಿ ಸಂಸ್ಥೆಯನ್ನು ಸ್ಥಾಪಿಸಲಿದೆ ಎಂದೂ ತಿಳಿಸಿದ್ದಾರೆ.

ಜಪಾನ್ ವಿಶ್ವದಲ್ಲೇ ಅತ್ಯಂತ ಕಡಿಮೆ ಜನನ ಪ್ರಮಾಣವನ್ನು ಹೊಂದಿರುವ ದೇಶವಾಗಿದ್ದು, 1899ರಿಂದ ಜನನ ದಾಖಲೆ ಕಾಯ್ದಿಟ್ಟುಕೊಳ್ಳಲು ಪ್ರಾರಂಭಿಸಿದಾಗಿನಿಂದ, 2022ರಲ್ಲಿ ಇದೇ ಪ್ರಥಮ ಬಾರಿಗೆ ದೇಶದಲ್ಲಿ 8,00,000ದಷ್ಟು ಕಡಿಮೆ ಪ್ರಮಾಣದ ಶಿಶು ಜನನವಾಗಿದೆ ಎಂದು ಆರೋಗ್ಯ ಇಲಾಖೆ ಅಂದಾಜಿಸಿದೆ.

ಹಾಗೆಯೇ ಇಡೀ ವಿಶ್ವದಲ್ಲಿ ಅತಿ ಹೆಚ್ಚು ಜೀವಿತಾವಧಿ ಹೊಂದಿರುವ ದೇಶ ಜಪಾನ್ ಆಗಿದ್ದು, 2022ರಲ್ಲಿ ಪ್ರತಿ 1,500 ಮಂದಿ ಪೈಕಿ ಓರ್ವ ವ್ಯಕ್ತಿ 100 ವರ್ಷ ಅಥವಾ ಅದಕ್ಕೂ ಮೇಲ್ಪಟ್ಟ ಜೀವಿತಾವಧಿ ಹೊಂದಿದ್ದದ್ದು ಸರ್ಕಾರಿ ದತ್ತಾಂಶಗಳಿಂದ ತಿಳಿದು ಬಂದಿದೆ.

Similar News