ಮಹಿಳೆಯರ ಐಪಿಎಲ್ ಟೂರ್ನಿ: ಗರಿಷ್ಠ ಬೆಲೆಗೆ ಅಹಮದಾಬಾದ್ ಫ್ರಾಂಚೈಸಿ ಖರೀದಿಸಿದ ಅದಾನಿ ಗ್ರೂಪ್

Update: 2023-01-25 12:38 GMT

  ಹೊಸದಿಲ್ಲಿ, ಜ.25: ಮೊದಲ ಆವೃತ್ತಿಯ ಮಹಿಳೆಯರ ಪ್ರೀಮಿಯರ್ ಲೀಗ್(ಡಬ್ಲುಪಿಎಲ್)ನ ಐದು ತಂಡಗಳು ಒಟ್ಟು 4,669.99 ಕೋ.ರೂ.ಗೆ ಮಾರಾಟವಾಗಿವೆ ಎಂದು ಬಿಸಿಸಿಐ ಬುಧವಾರ ಪ್ರಕಟಿಸಿದೆ.

ಅದಾನಿ ಗ್ರೂಪ್‌ನ ಅದಾನಿ ಸ್ಪೋಟ್ಸ್‌ಲೈನ್ 1, 289 ಕೋ.ರೂ. ಗೆ ಅಹಮದಾಬಾದ್ ಫ್ರಾಂಚೈಸಿಯನ್ನು ಖರೀದಿಸಿದೆ. ಮಹಿಳಾ ಐಪಿಎಲ್‌ನಲ್ಲಿ ಅಹಮದಾಬಾದ್ ಅತ್ಯಂತ ದುಬಾರಿ ತಂಡ ಎನಿಸಿಕೊಂಡಿದೆ.

ಪುರುಷರ ಐಪಿಎಲ್ ತಂಡಗಳಾದ ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಮಾಲಕರು, ಅದಾನಿ ಗ್ರೂಪ್ ಹಾಗೂ ಕಾಪ್ರಿ ಗ್ಲೋಬಲ್ ಕಂಪನಿಗಳು ಈ ವರ್ಷದ ಮಾರ್ಚ್‌ನಲ್ಲಿ ನಿಗದಿಯಾಗಿರುವ ಮೊದಲ ಆವೃತ್ತಿಯ ಟೂರ್ನಿಗಿಂತ ಮೊದಲು ಬುಧವಾರ ಮುಂಬೈನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಐದು ಮಹಿಳಾ ಐಪಿಎಲ್ ಫಾಂಚೈಸಿಗಳನ್ನು ಖರೀದಿಸಿದ್ದಾರೆ.

ಅಹಮದಾಬಾದ್ ಫ್ರಾಂಚೈಸಿ ಗರಿಷ್ಠ ಬೆಲೆಗೆ ಮಾರಾಟವಾದರೆ, ಮುಂಬೈ ಇಂಡಿಯನ್ಸ್(912.99 ಕೋ.ರೂ.), ರಾಯಲ್ ಚಾಲೆಂಜರ್ಸ್ ಬೆಂಗಳೂರು (901 ಕೋ.ರೂ.)ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (810 ಕೋ.ರೂ.) ಡಬ್ಲುಪಿಎಲ್‌ಗೆ ಪ್ರವೇಶ ಪಡೆದವು. ಡೆಲ್ಲಿ ಕ್ಯಾಪಿಟಲ್ಸ್ (810 ಕೋ.ರೂ.) ಕಾಪ್ರಿ ಗ್ಲೋಬಲ್ ಹೋಲ್ಡಿಂಗ್ಸ್ ನ ಪಾಲಾಯಿತು.

ಬಿಸಿಸಿಐ ಈ ತಿಂಗಳಾರಂಭದಲ್ಲಿ ಮಹಿಳಾ ಐಪಿಎಲ್‌ನ ಮಾಧ್ಯಮ ಹಕ್ಕುಗಳನ್ನು ವಯಾಕಾಮ್‌ಗೆ 951 ಕೋ.ರೂ.ಗೆ ಮಾರಾಟ ಮಾಡಿತ್ತು.

ಬುಧವಾರ ನಡೆದ ಫ್ರಾಂಚೈಸಿಗಳ ಹರಾಜಿನಲ್ಲಿ ಒಟ್ಟು 16 ಸಂಸ್ಥೆಗಳು ಭಾಗವಹಿಸಿದ್ದವು. 17 ಸಂಸ್ಥೆಗಳು ಬಿಡ್ ಸಲ್ಲಿಸಿದ್ದವು.

‘‘ಬಿಸಿಸಿಐ ಹಾಗೂ ಐಪಿಎಲ್ ಬ್ರಾಂಡ್‌ಗೆ ಇಂದು ಮೈಲಿಗಲ್ಲಿನ ದಿನ’’ ಎಂದು ಐಪಿಎಲ್ ಚೇರ್ಮನ್ ಅರುಣ್ ಧುಮಾಲ್ ಹೇಳಿದ್ದಾರೆ.

‘‘ಇಂದು ಕ್ರಿಕೆಟ್‌ನ ಐತಿಹಾಸಿಕ ದಿನ. ಮೊದಲ ಆವೃತ್ತಿಯ ಮಹಿಳಾ ಐಪಿಎಲ್ ತಂಡಗಳ ಬಿಡ್ಡಿಂಗ್ 2008ರಲ್ಲಿ ನಡೆದ ಪುರುಷರ ಮೊದಲ ಆವೃತ್ತಿಯ ದಾಖಲೆಯನ್ನು ಪುಡಿಗಟ್ಟಿದೆ. ವಿಜೇತರಿಗೆ ಅಭಿನಂದನೆಗಳು. ಒಟ್ಟು ಬಿಡ್‌ನಿಂದ ನಾವು 4, 669.99 ಕೋ.ರೂ. ಗಳಿಸಿದ್ದೇವೆ. ಇದು ಮಹಿಳಾ ಕ್ರಿಕೆಟ್ ಕ್ರಾಂತಿಯ ಆರಂಭದ ಸಂಕೇತವಾಗಿದೆ’’ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಟ್ವೀಟಿಸಿದ್ದಾರೆ.
 

Similar News