ಸೂರ್ಯಕುಮಾರ್‌ಗೆ ಐಸಿಸಿ ವರ್ಷದ ಟಿ-20 ಕ್ರಿಕೆಟಿಗ ಪ್ರಶಸ್ತಿ

Update: 2023-01-25 14:53 GMT

ದುಬೈ, ಜ.25: ಭಾರತದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಸೂರ್ಯಕುಮಾರ್ 2022ರಲ್ಲಿ ಸೀಮಿತ ಓವರ್ ಕ್ರಿಕೆಟ್‌ನಲ್ಲಿ ನೀಡಿರುವ ಅತ್ಯಮೋಘ ಪ್ರದರ್ಶನಕ್ಕೆ ಐಸಿಸಿ ವರ್ಷದ ಟಿ-20 ಕ್ರಿಕೆಟಿಗ ಪ್ರಶಸ್ತಿಗೆ ನೇಮಕವಾಗಿದ್ದಾರೆ ಎಂದು ICC ಬುಧವಾರ ತಿಳಿಸಿದೆ.

‘SKY’ ಎಂದೇ ಖ್ಯಾತರಾಗಿರುವ ಸೂರ್ಯ ಕಳೆದ ವರ್ಷ 31 ಟಿ-20 ಪಂದ್ಯಗಳಲ್ಲಿ 1,164 ರನ್ ಗಳಿಸಿದ್ದಾರೆ. ಆಸ್ಟ್ರೇಲಿಯದ ಸ್ಯಾಮ್ ಕರನ್, ಪಾಕಿಸ್ತಾನದ ವಿಕೆಟ್‌ಕೀಪರ್-ಬ್ಯಾಟರ್ ಮುಹಮ್ಮದ್ ರಿಝ್ವಾನ್ ಹಾಗೂ ಝಿಂಬಾಬ್ವೆಯ ಆಲ್‌ರೌಂಡರ್ ಸಿಕಂದರ್ ರಝಾ ಅವರನ್ನು ಸ್ಪರ್ಧೆಯಲ್ಲಿ ಸೋಲಿಸಿ ಉನ್ನತ ಗೌರವ ಪಡೆದರು.

2022ರಲ್ಲಿ ಟಿ-20 ಕ್ರಿಕೆಟ್‌ನಲ್ಲಿ ಕ್ಯಾಲೆಂಡರ್ ವರ್ಷದಲ್ಲಿ 1 ಸಾವಿರಕ್ಕೂ ಅಧಿಕ ರನ್ ಗಳಿಸಿದ 2ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಸೂರ್ಯ ಒಂದೇ ವರ್ಷದಲ್ಲಿ 68 ಸಿಕ್ಸರ್‌ಗಳನ್ನು ಸಿಡಿಸಿದ್ದರು. 2022ರಲ್ಲಿ ಟಿ-20ಯಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ಸಾಧನೆ ಮಾಡಿದ್ದರು. ಆಸ್ಟ್ರೇಲಿಯದಲ್ಲಿ ನಡೆದಿದ್ದ ಟಿ-20 ವಿಶ್ವಕಪ್‌ನಲ್ಲಿ 6 ಇನಿಂಗ್ಸ್‌ಗಳಲ್ಲಿ 3 ಅರ್ಧಶತಕ ಸಿಡಿಸಿದ್ದರು. ಸೂರ್ಯ 890 ರೇಟಿಂಗ್ ಪಾಯಿಂಟ್ಸ್‌ನೊಂದಿಗೆ ಅಗ್ರ ರ್ಯಾಂಕಿನ ಟ್ವೆಂಟಿ-20 ಆಟಗಾರನಾಗಿದ್ದಾರೆ.

ರೇಣುಕಾ ಸಿಂಗ್‌ಗೆ ಐಸಿಸಿ ವರ್ಷದ ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿ

ಭಾರತದ ಸ್ಟಾರ್ ವೇಗದ ಬೌಲರ್ ರೇಣುಕಾ ಸಿಂಗ್ ಐಸಿಸಿ ವರ್ಷದ ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. 2022ರಲ್ಲಿ ಅವರ ಅಮೋಘ ವೇಗ ಹಾಗೂ ಸ್ವಿಂಗ್ ಬೌಲಿಂಗ್‌ಗೆ ಈ ಪ್ರಶಸ್ತಿ ಲಭಿಸಿದೆ ಎಂದು ಐಸಿಸಿ ಬುಧವಾರ ತಿಳಿಸಿದೆ.

ರೇಣುಕಾ ಸಿಂಗ್ ಏಕದಿನ ಕ್ರಿಕೆಟ್‌ನಲ್ಲಿ 4.62ರ ಇಕಾನಮಿ ರೇಟ್‌ನಲ್ಲಿ 18 ವಿಕೆಟ್‌ಗಳನ್ನು ಪಡೆದರೆ, 6.50ರ ಇಕಾನಮಿ ರೇಟ್‌ನಲ್ಲಿ 22 ಟ್ವೆಂಟಿ-20 ವಿಕೆಟ್‌ಗಳನ್ನು ಕಬಳಿಸಿದ್ದರು.

ರೇಣುಕಾ ಪ್ರತಿಸ್ಪರ್ಧಿಗಳಾದ ಆಸ್ಟ್ರೇಲಿಯದ ಡಾರ್ಸಿ ಬ್ರೌನ್, ಇಂಗ್ಲೆಂಡ್‌ನ ಅಲೈಸ್ ಕಾಪ್ಸೆ ಹಾಗೂ ಸಹ ಆಟಗಾರ್ತಿ ಯಸ್ತಿಕಾ ಭಾಟಿಯಾರನ್ನು ಹಿಂದಿಕ್ಕಿ 2022ರ ವರ್ಷದ ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಆಯ್ಕೆಯಾದರು.

26ರ ಹರೆಯದ ರೇಣುಕಾ 2022ರಲ್ಲಿ ಏಕದಿನ ಹಾಗೂ ಟಿ-20 ಮಾದರಿಯ 29 ಪಂದ್ಯಗಳಲ್ಲಿ ಒಟ್ಟು 40 ವಿಕೆಟ್‌ಗಳನ್ನು ಉರುಳಿಸಿದ್ದರು. ಕಾಮನ್‌ವೆಲ್ತ್ ಗೇಮ್ಸ್ ಹಾಗೂ ಏಶ್ಯ ಕಪ್‌ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದರು.

ಇದನ್ನೂ ಓದಿ: ICC ರ್‍ಯಾಂಕಿಂಗ್ ನಲ್ಲಿ ನಂ.1 ಪಟ್ಟಕ್ಕೇರಿದ ಸಿರಾಜ್: ಟ್ರೋಲ್‌ ಮಾಡಿದವರು ಕ್ಷಮೆಯಾಚಿಸಬೇಕೆಂದ ಅಭಿಮಾನಿಗಳು

Similar News