ಅಮೆರಿಕದಲ್ಲಿ ಮತ್ತೆ ಶೂಟೌಟ್ : 3 ಮಂದಿ ಮೃತ್ಯು, ಶಂಕಿತ ಆತ್ಮಹತ್ಯೆ

Update: 2023-01-25 17:18 GMT

ವಾಷಿಂಗ್ಟನ್, ಜ.25: ಅಮೆರಿಕದಲ್ಲಿ ಮತ್ತೊಂದು ಗುಂಡಿನ ದಾಳಿ ಪ್ರಕರಣ ವರದಿಯಾಗಿದೆ. ವಾಷಿಂಗ್ಟನ್ ರಾಜ್ಯದ ಸೂಪರ್ಮಾರ್ಕೆಟ್ ಒಂದಕ್ಕೆ ನುಗ್ಗಿದ ಬಂದೂಕುಧಾರಿ ಮನಬಂದಂತೆ ಗುಂಡು ಹಾರಿಸಿ 3 ಮಂದಿಯನ್ನು ಹತ್ಯೆ ಮಾಡಿದ ಬಳಿಕ ಸ್ವಯಂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಮಂಗಳವಾರ ಯಕೀಮಾ ನಗರದಲ್ಲಿನ ಸೂಪರ್ಮಾರ್ಕೆಟ್ನಲ್ಲಿ ಈ ಘಟನೆ ನಡೆದಿದ್ದು , ಶಂಕಿತನನ್ನು 21 ವರ್ಷದ ಸ್ಥಳೀಯ ಯುವಕ ಜಾರಿಡ್ ಹ್ಯಾಡಕ್ ಎಂದು ಗುರುತಿಸಲಾಗಿದೆ. ಶೂಟೌಟ್ ನಡೆಸಿದ ಹ್ಯಾಡಕ್ ಅಲ್ಲಿಂದ ಪರಾರಿಯಾಗಿದ್ದ. ಆತನ ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿಯುತ್ತಿದ್ದಂತೆಯೇ, ಸಮೀಪದ ಮತ್ತೊಂದು ಸೂಪರ್ಮಾರ್ಕೆಟ್ನ ಬಳಿ ಆತ ಆತ್ಮಹತ್ಯೆ ಮಾಡಿಕೊಂಡಿರುವ ಮಾಹಿತಿ ಲಭಿಸಿದೆ. ಸ್ಥಳೀಯ ಮಹಿಳೆಯೊಬ್ಬರ ಮೊಬೈಲ್ ಪಡೆದು ತನ್ನ ತಾಯಿಗೆ ಕರೆ ಮಾಡಿದ ಹ್ಯಾಡಕ್ `ತಾನು ಕೆಲವರನ್ನು ಹತ್ಯೆ ಮಾಡಿದ್ದು, ಈಗ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ' ಎಂದು ಹೇಳಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ವರದಿಯಾಗಿದೆ.

Similar News