ಕಾಶ್ಮೀರ ವಿಷಯದಲ್ಲಿ ಭಾರತ-ಪಾಕ್ ನಡುವೆ ರಚನಾತ್ಮಕ ಚರ್ಚೆಗೆ ಬೆಂಬಲ: ಅಮೆರಿಕ

Update: 2023-01-25 18:14 GMT

ವಾಷಿಂಗ್ಟನ್, ಜ.25: ಭಾರತ ಮತ್ತು ಪಾಕಿಸ್ತಾನಗಳ ಮಧ್ಯೆ ರಚನಾತ್ಮಕ ಚರ್ಚೆಗೆ ಅಮೆರಿಕದ ಬೆಂಬಲವಿದೆ. ಆದರೆ ಮಾತುಕತೆಯ ಸ್ವರೂಪವನ್ನು ಈ ಎರಡು ದೇಶಗಳೇ ನಿರ್ಧರಿಸಬೇಕಿದೆ ಎಂದು ಅಮೆರಿಕದ ವಿದೇಶಾಂಗ ಸಚಿವಾಲಯದ ವಕ್ತಾರ ನೆಡ್ ಪ್ರೈಸ್ ಹೇಳಿದ್ದಾರೆ.

ಕಾಶ್ಮೀರ ವಿಷಯದ ಕುರಿತು ಮಾಧ್ಯಮದವರ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಕಾಶ್ಮೀರದ ಸ್ವಾಯತ್ತತೆಯ ವಿಷಯಕ್ಕೆ ಮೊದಲ ಆದ್ಯತೆ ನೀಡಲಿದೆ ಎಂಬ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿದ ಪ್ರೈಸ್ `ಉಭಯ ದೇಶಗಳ  ನಡುವೆ ಕಾಶ್ಮೀರ ವಿಷಯದ ಕುರಿತು ರಚನಾತ್ಮಕ ಮಾತುಕತೆಗೆ ಅಮೆರಿಕದ ಬೆಂಬಲವಿದೆ' ಎಂದರು. 

ಭಾರತದ ಜತೆ ಮಾತುಕತೆ ಮುಂದುವರಿಸಲು ಪಾಕಿಸ್ತಾನ ಸಿದ್ಧ ಎಂಬ ಪಾಕ್ ಪ್ರಧಾನಿ ಶಹಬಾಝ್ ಶರೀಫ್ ಅವರ ಹೇಳಿಕೆ ಮತ್ತು ಅದಕ್ಕೆ ಭಾರತದ ಪ್ರತಿಕ್ರಿಯೆಯನ್ನು ಪ್ರಸ್ತಾವಿಸಿದ ಅವರು `ದಕ್ಷಿಣ ಏಶ್ಯಾದಲ್ಲಿ ಪ್ರಾದೇಶಿಕ ಸ್ಥಿರತೆಯ ಬಗ್ಗೆ  ನಾವು ದೀರ್ಘಕಾಲದಿಂದಲೂ ಕರೆ ನೀಡಿದ್ದೇವೆ. ಅದನ್ನು ನೋಡಲು ನಾವು ಬಯಸುತ್ತೇವೆ, ಪ್ರಾದೇಶಿಕ ಸ್ಥಿರತೆಯಲ್ಲಿ ಸುಧಾರಣೆಯನ್ನು ನಾವು ಬಯಸುತ್ತೇವೆ.

ನಮ್ಮ ಪಾಲುದಾರಿಕೆಯ ವಿಷಯಕ್ಕೆ ಬಂದರೆ, ಭಾರತ ಮತ್ತು ಪಾಕಿಸ್ತಾನದೊಂದಿಗಿನ ನಮ್ಮ ಸಂಬಂದಕ್ಕೆ ಅದರದ್ದೇ ಆದ ವ್ಯವಸ್ಥೆಯಿದೆ. ಈ ಸಂಬಂಧಗಳನ್ನು ಶೂನ್ಯ ಮೊತ್ತವಾಗಿ ನೋಡುವುದಿಲ್ಲ'  ಎಂದರು. ರಶ್ಯದ ತೈಲದ ಕುರಿತ ವಿಷಯಕ್ಕೆ ಪ್ರತಿಕ್ರಿಯಿಸಿದ ಪ್ರೈಸ್ ` ಅಮೆರಿಕವು ಉದ್ದೇಶಪೂರ್ವಕವಾಗಿ ರಶ್ಯದ ತೈಲದ ಮೇಲೆ ನಿರ್ಬಂಧ ವಿಧಿಸಿಲ್ಲ, ಅದರ ಬದಲು ಬೆಲೆ ಮಿತಿಯನ್ನು ವಿಧಿಸಿದೆ. ಬೆಲೆ ಮಿತಿಯ ಲಾಭವೆಂದರೆ, ಇದು ಆದಾಯಕ್ಕೆ ಮಿತಿ ಹೇರುವ ಜತೆಗೆ ಇಂಧನ ಮಾರುಕಟ್ಟೆ ಬರಿದಾಗದಂತೆ ನೋಡಿಕೊಳ್ಳುತ್ತದೆ.  ಬೆಲೆ ಮಿತಿ ಘೋಷಣೆಗೆ ಅಧಿಕೃತವಾಗಿ ಸಹಿ ಹಾಕದ ಕೆಲವು ದೇಶಗಳೂ ಇದರ ಪ್ರಯೋಜನ ಪಡೆಯಬೇಕು ಮತ್ತು ಅಧಿಕ ಡಿಸ್ಕೌಂಟ್ನ ಲಾಭ ಪಡೆಯಲು ನಾವು ಪ್ರೋತ್ಸಾಹಿಸುತ್ತೇವೆ' ಎಂದು ಹೇಳಿದರು.

ಕಾಶ್ಮೀರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಾಮಾಣಿಕ ಮತ್ತು ಗಂಭೀರ ಮಾತುಕತೆಗೆ ಮುಂದಾಗುವಂತೆ ಪಾಕ್ ಪ್ರಧಾನಿ ಶಹಬಾಝ್ ಶರೀಫ್ ಕಳೆದ ವಾರ ಪ್ರಧಾನಿ ನರೇಂದ್ರ ಮೋದಿಗೆ ಆಹ್ವಾನ ನೀಡಿದ್ದರು.

Similar News