ಉಕ್ರೇನ್‌ ಗೆ ಲೆಪರ್ಡ್ ಟ್ಯಾಂಕ್ ಪೂರೈಸಲು ಜರ್ಮನಿ ಒಪ್ಪಿಗೆ

Update: 2023-01-25 18:22 GMT

ಬರ್ಲಿನ್, ಜ.25: ಉಕ್ರೇನ್  ಮತ್ತು ಇತರ ಮಿತ್ರರಾಷ್ಟ್ರಗಳ ನಿರಂತರ ಒತ್ತಡಕ್ಕೆ ಕಡೆಗೂ ಮಣಿದಿರುವ ಜರ್ಮನಿ, ರಶ್ಯದ ಆಕ್ರಮಣವನ್ನು ಹಿಮ್ಮೆಟ್ಟಿಸಲು ಜರ್ಮನಿಗೆ ಬಲಿಷ್ಟ, ಅತ್ಯಾಧುನಿಕ ಲೆಪರ್ಡ್ ಟ್ಯಾಂಕ್ ಗಳ ಪೂರೈಕೆಗೆ ಅನುಮೋದಿಸಿದೆ.

ರಕ್ಷಣಾ ಪಡೆಯ ದಾಸ್ತಾನಿನಿಂದ 14 ಲೆಪರ್ಡ್ 2ಎ6 ಟ್ಯಾಂಕ್ ಗಳನ್ನು ಉಕ್ರೇನ್ಗೆ ಒದಗಿಸಲಾಗುವುದು. ಅಲ್ಲದೆ ಇತರ ಯುರೋಪಿಯನ್ ದೇಶಗಳೂ ತಮ್ಮ ದಾಸ್ತಾನಿನಿಂದ ಲೆಪರ್ಡ್ ಟ್ಯಾಂಕ್ ಗಳನ್ನು ಉಕ್ರೇನ್ಗೆ ಒದಗಿಸಲು ನಮ್ಮ ಆಕ್ಷೇಪಣೆಯಿಲ್ಲ. ಉಕ್ರೇನ್ ನಲ್ಲಿ ಲೆಪರ್ಡ್ ಟ್ಯಾಂಕ್ ನ 2 ತುಕಡಿಯನ್ನು ಕ್ಷಿಪ್ರವಾಗಿ ರಚಿಸುವ ಉದ್ದೇಶವಿದೆ  ಎಂದು ಸರಕಾರದ ವಕ್ತಾರ ಸ್ಟೀಫನ್ ಹೆಬೆಸ್ಟ್ರೀಟ್ ಹೇಳಿದ್ದಾರೆ. ಜರ್ಮನ್ ಛಾನ್ಸಲರ್ ಒಲಾಫ್ ಶ್ಹಾಲ್ಝ್  ಉಕ್ರೇನ್ಗೆ ಘೋಷಿಸಿರುವ ನೆರವಿನ ಪ್ಯಾಕೇಜ್ನಲ್ಲಿ ಲೆಪರ್ಡ್ ಟ್ಯಾಂಕ್ ಪೂರೈಕೆಯ ಜತೆಗೆ, ಈ ಟ್ಯಾಂಕ್ಗಳ ನಿರ್ವಹಣೆಗೆ ಉಕ್ರೇನ್ ಯೋಧರಿಗೆ ಜರ್ಮನಿಯಲ್ಲಿ ತರಬೇತಿ ನೀಡುವುದೂ ಸೇರಿದೆ.

ತಮ್ಮ ಶಸ್ತ್ರಾಸ್ತ್ರ ಸಂಗ್ರಹದಿಂದ ಉಕ್ರೇನ್ಗೆ ಲೆಪರ್ಡ್ ಟ್ಯಾಂಕ್ ಪೂರೈಸಲು ಸಿದ್ಧ ಎಂದು ಫಿನ್ಲ್ಯಾಂಡ್, ಪೋಲ್ಯಾಂಡ್ ಸಹಿತ ಹಲವು ಯುರೋಪಿಯನ್ ದೇಶಗಳು ಹೇಳಿವೆ. ಉಕ್ರೇನ್ಗೆ ಗಣನೀಯ ಪ್ರಮಾಣದಲ್ಲಿ ಅಬ್ರಾಮ್ಸ್ ಎಂ1 ಟ್ಯಾಂಕ್ ಒದಗಿಸುವುದಾಗಿ ಅಮೆರಿಕ ಘೋಷಿಸಿದೆ.

Similar News