ಪಾಕಿಸ್ತಾನ: ನಿಗೂಢ ಕಾಯಿಲೆಯಿಂದ 14 ಮಕ್ಕಳ ಸಹಿತ 18 ಮಂದಿ ಮೃತ್ಯು

Update: 2023-01-27 18:13 GMT

ಇಸ್ಲಮಾಬಾದ್, ಜ.27: ಪಾಕಿಸ್ತಾನದ ವಾಣಿಜ್ಯಕೇಂದ್ರ ಕರಾಚಿಯ ಕೆಮಾರಿ ಪ್ರದೇಶದಲ್ಲಿ ನಿಗೂಢ ಕಾಯಿಲೆಗೆ 14 ಮಕ್ಕಳ ಸಹಿತ 18 ಮಂದಿ ಬಲಿಯಾಗಿದ್ದಾರೆ. ಸಾವಿನ ಕಾರಣವನ್ನು ಕಂಡುಹಿಡಿಯಲು ಇನ್ನೂ ಸಾಧ್ಯವಾಗಿಲ್ಲ ಎಂದು ಆರೋಗ್ಯಾಧಿಕಾರಿಗಳು ಹೇಳಿದ್ದಾರೆ.

ಜನವರಿ 10ರಿಂದ 25ರವರೆಗಿನ ಅವಧಿಯಲ್ಲಿ ಕೆಮಾರಿಯ ಮವಾಚ್ಗೋಥ್ ಪ್ರದೇಶದಲ್ಲಿ ನಿಗೂಢ ಕಾಯಿಲೆಯಿಂದ 14 ಮಕ್ಕಳ ಸಹಿತ 18 ಮಂದಿ ಮೃತಪಟ್ಟಿದ್ದಾರೆ. ಇವರಲ್ಲಿ ಒಂದೇ ಕುಟುಂಬದ 6 ಮಂದಿ ಸೇರಿದ್ದಾರೆ ಎಂದು ಆರೋಗ್ಯಸೇವೆಗಳ ನಿರ್ದೇಶಕ ಅಬ್ದುಲ್ ಹಮೀದ್ ಜುಮಾನಿ ದೃಢಪಡಿಸಿದ್ದಾರೆ. ಈ ಸಾವುಗಳಿಗೆ ಕಾರಣವನ್ನು ಪತ್ತೆಹಚ್ಚಲು ಆರೋಗ್ಯ ತಂಡ ಇದೀಗ ಕಾರ್ಯನಿರ್ವಹಿಸುತ್ತಿದೆ. ಆದರೆ ಮವಾಚ್ಗೋಥ್ ಪ್ರದೇಶವು ಕರಾವಳಿ ತೀರಕ್ಕೆ ಸಮೀಪದಲ್ಲಿರುವುದರಿಂದ ಇದು ಸಮುದ್ರ ಅಥವಾ ನೀರಿಗೆ ಸಂಬಂಧಿಸಿದ ಕಾಯಿಲೆಯಾಗಿರಬಹುದೆಂದು ಅಂದಾಜಿಸಲಾಗಿದೆ ಎಂದವರು ಹೇಳಿದ್ದಾರೆ. ಮೃತಪಟ್ಟವರು ತೀವ್ರ ಜ್ವರ, ಗಂಟಲಿನಲ್ಲಿ ಊತ ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು ಎಂದು ಕುಟುಂಬದ ಸದಸ್ಯರು ಮಾಹಿತಿ ನೀಡಿದ್ದಾರೆ. ಕಳೆದ 2 ವಾರಗಳಿಂದ ಈ ಪ್ರದೇಶದಲ್ಲಿ ವಿಚಿತ್ರ ವಾಸನೆ ಬರುತ್ತಿತ್ತು ಎಂದು ಇಲ್ಲಿನ ನಿವಾಸಿಗಳು ದೂರಿದ್ದಾರೆ. ಕೊಳೆಗೇರಿ ಪ್ರದೇಶವಾಗಿರುವ ಮವಾಚ್ ಗೋಥ್ನ ಬಹುತೇಕ ನಿವಾಸಿಗಳು ದಿನಗೂಲಿ ಕಾರ್ಮಿಕರು ಅಥವಾ ಮೀನುಗಾರರು.

ಈ ಪ್ರದೇಶದ ಫ್ಯಾಕ್ಟರಿಯೊಂದರ ಮಾಲಕನನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ. ಇಲ್ಲಿ ಕಾರ್ಯನಿರ್ವಹಿಸುವ ಇತರ 3 ಫ್ಯಾಕ್ಟರಿಗಳಿಂದ ನೀರಿನ ಸ್ಯಾಂಪಲ್ ಸಂಗ್ರಹಿಸಿ ಪರಿಶೀಲಿಸುವಂತೆ ಪ್ರಾಂತೀಯ ಪರಿಸರ ಸಂಸ್ಥೆಗೆ ಸೂಚಿಸಲಾಗಿದೆ ಎಂದು ಕೆಮಾರಿ ಪ್ರದೇಶದ ಉಪ ಆಯುಕ್ತ ಮುಖ್ತಾರ್ ಅಲಿ ಅಬ್ರೋ ಹೇಳಿದ್ದಾರೆ.

ಈ ಪ್ರದೇಶದ ಕೆಲ ಫ್ಯಾಕ್ಟರಿಗಳಿಂದ ಸೋಯಾಬೀನ್ನ ಸ್ಯಾಂಪಲ್ಗಳನ್ನು ಸಂಗ್ರಹಿಸಲಾಗಿದ್ದು ಸೋಯಾ ಅಲರ್ಜಿ ಈ ನಿಗೂಢ ಕಾಯಿಲೆಗೆ ಕಾರಣವಾಗಿರಬಹುದು . ಗಾಳಿಯಲ್ಲಿರುವ ಸೋಯಾಬೀನ್ನ ಧೂಳಿನ ಕಣಗಳೂ ಸಹ ಗಂಭೀರ ಕಾಯಿಲೆ ಮತ್ತು ಸಾವಿಗೆ ಕಾರಣವಾಗಿರಬಹುದು. ವಾಯುಮಾಲಿನ್ಯ ಮತ್ತು ಹವಾಮಾನ ವೈಪರೀತ್ಯವೂ ಹಲವು ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ನಾವು ಇನ್ನೂ ಖಚಿತ ಕಾರಣ ತಿಳಿದುಕೊಂಡಿಲ್ಲ. ಮಾದರಿಗಳನ್ನು ಪರೀಕ್ಷಿಸಲಾಗುತ್ತಿದೆ ಎಂದು ಸಿಂಧ್ ರಾಸಾಯನಿಕ ವಿಜ್ಞಾನ ಕೇಂದ್ರದ ಮುಖ್ಯಸ್ಥ ಇಕ್ಬಾಲ್ ಚೌಧರಿ ಹೇಳಿದ್ದಾರೆ.

Similar News