​'ತಟಸ್ಥ' ಧ್ವಜದಡಿ ಸ್ಪರ್ಧಿಸಿ ಗ್ರ್ಯಾನ್ ಸ್ಲಾಮ್ ಚಾಂಪಿಯನ್ ಕಿರೀಟ ಧರಿಸಿದ ಮೊದಲ ಆಟಗಾರ್ತಿ ಸಬಲೆಂಕಾ

Update: 2023-01-28 18:03 GMT

ಮೆಲ್ಬೋರ್ನ್: ಆಸ್ಟ್ರೇಲಿಯನ್ ಓಪನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್  ಫೈನಲ್ ನಲ್ಲಿ ಕಝಕ್ ನ ಎಲೆನಾ ರೈಬಾಕಿನಾ(Elena Rybakina) ಅವರನ್ನು 4-6, 6-3, 6-4  ಅಂತರದಿಂದ ಸೋಲಿಸಿದ ಬೆಲಾರುಸ್ ಆಟಗಾರ್ತಿ ಅರ್ಯನಾ ಸಬಲೆಂಕಾ(Aryna Sabalenka) ಸಿಂಗಲ್ಸ್ ವಿಭಾಗದಲ್ಲಿ ಚೊಚ್ಚಲ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಜಯಿಸಿದ್ದಾರೆ.

ಬೆಲಾರುಸ್ ನ 24 ವರ್ಷ ವಯಸ್ಸಿನ ಆಟಗಾರ್ತಿ ಈ ಹಿಂದೆ 2019 ರಲ್ಲಿ ಯುಎಸ್ ಓಪನ್  ಹಾಗೂ 2021 ರಲ್ಲಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯನ್ನು ಗೆದ್ದಿದ್ದರು.  ಆದರೆ ಎರಡೂ ಸಂದರ್ಭಗಳಲ್ಲಿ ಅವರಯ  ಎಲಿಸ್ ಮೆರ್ಟೆನ್ಸ್ ಜೊತೆಗೆ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದ್ದರು.

ಉಕ್ರೇನ್ ಮೇಲೆ ರಶ್ಯ ಆಕ್ರಮಣ ನಡೆಸಿರುವ ಕಾರಣ  ಎಲ್ಲಾ ರಶ್ಯ ಹಾಗೂ ಬೆಲಾರುಸ್ ಕ್ರೀಡಾಪಟುಗಳಿಗೆ ಹೆಚ್ಚಿನ ಜಾಗತಿಕ ಕ್ರೀಡೆಗಳಲ್ಲಿ ತಮ್ಮ ರಾಷ್ಟ್ರವನ್ನು ಪ್ರತಿನಿಧಿಸದಂತೆ ನಿಷೇಧಿಸಲಾಗಿತ್ತು. ಈ ಎರಡು ದೇಶಗಳ ಬಿಕ್ಕಟ್ಟು ಇನ್ನೂ ಕೊನೆಗೊಳ್ಳದ ಪರಿಣಾಮವಾಗಿ ರಶ್ಯ ಹಾಗೂ ಬೆಲಾರುಸ್ ಟೆನಿಸ್ ಆಟಗಾರ್ತಿಯರು ಈಗಲೂ ತಮ್ಮ ರಾಷ್ಟ್ರವನ್ನು ಪ್ರತಿನಿಧಿಸುವಂತಿಲ್ಲ. ಬೆಲಾರುಸ್ ನ ಸಬಲೆಂಕಾ  ತಟಸ್ಥ ಧ್ವಜದ ಅಡಿಯಲ್ಲಿ ಸ್ಪರ್ಧಿಸಿ  ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆದ್ದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.  

ಸಬಲೆಂಕಾ ಅವರ ಎದುರಾಳಿ ರೈಬಾಕಿನಾ ರಷ್ಯಾದಲ್ಲಿ ಜನಿಸಿದ್ದರು. ಆದಾಗ್ಯೂ, ಹಾಲಿ ವಿಂಬಲ್ಡನ್ ಚಾಂಪಿಯನ್ ರೈಬಾಕಿನಾ 2018 ರಲ್ಲಿ ಕಝಾಕಿಸ್ತಾನಿನ  ಪ್ರಜೆಯಾಗಲು ನಿರ್ಧರಿಸಿದ್ದರು. ಹೀಗಾಗಿ ಅವರು 'ತಟಸ್ಥ' ಆಟಗಾರ್ತಿಯಾಗಿ  ಭಾಗವಹಿಸುವುದರಿಂದ  ವಿನಾಯಿತಿ ಪಡೆದರು.
ಜಾಗತಿಕ ಟೆನಿಸ್ ಸಂಸ್ಥೆಗಳು ಜಾರಿಗೊಳಿಸಿದ ನಿಯಮದಿಂದಾಗಿ ಯಾವುದೇ ಸ್ಟೇಡಿಯಮ್ ನೊಳಗೆ ಬೆಲಾರುಸ್  ಧ್ವಜಗಳನ್ನು ತರಲು  ಅನುಮತಿ ಇಲ್ಲ ಹಾಗೂ  ವಿಜೇತರ ಟ್ರೋಫಿಯಲ್ಲಿಯೂ ಕೂಡ  ಸಬಲೆಂಕಾ ಅವರ ರಾಷ್ಟ್ರೀಯತೆಯ ಉಲ್ಲೇಖ ಇರುವುದಿಲ್ಲ.

ಉಕ್ರೇನ್ ನಲ್ಲಿ ಸಂಘರ್ಷ ಆರಂಭವಾದಾಗಿನಿಂದ ಸಬಲೆಂಕಾಗೆ ಕಠಿಣ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಬೆಲಾರುಸ್ ಹಾಗೂ ರಷ್ಯಾದ ಟೆನಿಸ್ ಆಟಗಾರರಿಗೆ  2022 ರಲ್ಲಿ ವಿಂಬಲ್ಡನ್ ಆಡದಂತೆ ನಿಷೇಧಿಸಲಾಯಿತು. ಅದು ಅವರ ಶ್ರೇಯಾಂಕಗಳ ಮೇಲೆ ಪ್ರಮುಖ ಪ್ರಭಾವ ಬೀರಿತು. 2023ರಲ್ಲಿಯೂ ವಿಂಬಲ್ಡನ್ ನಲ್ಲಿ ಈ ನಿರ್ಧಾರ  ಮುಂದುವರಿಯಲಿದೆಯೇ ಎಂಬುದು ಇನ್ನೂ ಗೊತ್ತಾಗಿಲ್ಲ.

Similar News