​ಪಾಕಿಸ್ತಾನ: ಅವಳಿ ಸಾರಿಗೆ ದುರಂತ; 10 ಮಕ್ಕಳ ಸಹಿತ 51 ಮಂದಿ ಮೃತ್ಯು‌

Update: 2023-01-29 17:35 GMT

ಇಸ್ಲಮಾಬಾದ್, ಜ.29: ಪಾಕಿಸ್ತಾನದಲ್ಲಿ ರವಿವಾರ ಸಂಭವಿಸಿದ ಎರಡು ಪ್ರತ್ಯೇಕ ಸಾರಿಗೆ ಅಪಘಾತದಲ್ಲಿ 10 ಮಕ್ಕಳ ಸಹಿತ 51 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ.ವಾಯವ್ಯ ಪಾಕಿಸ್ತಾನದ ಖೈಬರ್ ಪಖ್ತೂಂಕ್ವಾ ಪ್ರಾಂತದ ಕೊಹಟ್ ನಗರದ ಬಳಿ ಶಾಲಾ ವಿದ್ಯಾರ್ಥಿಗಳಿದ್ದ ದೋಣಿಯೊಂದು ತಂಡಾ ಡ್ಯಾಮ್ ಸರೋವರದಲ್ಲಿ ಮುಳುಗಿದ ದುರಂತದಲ್ಲಿ 10 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಮೃತರು 7ರಿಂದ 14ರ ವಯಸ್ಸಿನವರು. ಮುಳುಗಿದ್ದ ದೋಣಿಯಿಂದ 11 ಮಕ್ಕಳನ್ನು ರಕ್ಷಿಸಲಾಗಿದ್ದು ಇವರಲ್ಲಿ 6 ವಿದ್ಯಾರ್ಥಿಗಳು ಗಂಭೀರವಾಗಿ ಅಸ್ವಸ್ಥರಾಗಿದ್ದಾರೆ. ಸುಮಾರು 9 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ. ಸ್ಥಳೀಯ ಮದ್ರಸಾದ ಸುಮಾರು 30 ವಿದ್ಯಾರ್ಥಿಗಳು ಈ ದೋಣಿಯಲ್ಲಿದ್ದರು. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಸ್ಥಳೀಯ ಪೊಲೀಸರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ನೈಋತ್ಯ ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತದಲ್ಲಿ ಶನಿವಾರ ತಡರಾತ್ರಿ ನಡೆದ ಮತ್ತೊಂದು ದುರ್ಘಟನೆಯಲ್ಲಿ ಬಸ್ಸೊಂದು ಸೇತುವೆ ಮೇಲಿನ ಕಂಬಕ್ಕೆ ಡಿಕ್ಕಿಹೊಡೆದು ಕೆಳಗಿನ ಕಂದರಕ್ಕೆ ಉರುಳಿದಾಗ ಬಸ್ಸಿಗೆ ಬೆಂಕಿ ಹತ್ತಿಕೊಂಡಿದ್ದು ಕನಿಷ್ಟ 40 ಮಂದಿ ಮೃತಪಟ್ಟಿದ್ದಾರೆ. ಬಸ್ಸಿನಲ್ಲಿ 48 ಪ್ರಯಾಣಿಕರಿದ್ದರು ಎಂಬ ಮಾಹಿತಿಯಿದ್ದು ಮೂವರನ್ನು ರಕ್ಷಿಸಲಾಗಿದೆ. ಉಳಿದವರ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಮೃತದೇಹಗಳು ಗುರುತಿಸುವ ಸ್ಥಿತಿಯಲ್ಲಿಲ್ಲ ಎಂದು ಬಲೂಚಿಸ್ತಾನ ಪ್ರಾಂತದ ಲಸ್ಬೆಲಾ ಜಿಲ್ಲೆಯ ಹಿರಿಯ ಅಧಿಕಾರಿ ಹಮ್ಝಾ ಅಂಜುಮ್ ಹೇಳಿದ್ದಾರೆ.

ಈ ಬಸ್ಸು ಬಲೂಚಿಸ್ತಾನ ಪ್ರಾಂತದ ರಾಜಧಾನಿ ಕ್ವೆಟಾದಿಂದ ದಕ್ಷಿಣದ ಬಂದರು ನಗರಿ ಕರಾಚಿಯತ್ತ ಸಂಚರಿಸುತ್ತಿತ್ತು. ಚಾಲಕ ನಿದ್ದೆಯ ಮಂಪರಿನಲ್ಲಿ ಇದ್ದುದು ಅಪಘಾತಕ್ಕೆ ಕಾರಣವಾಗಿರಬಹುದು. ಅಪಘಾತದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಮೃತದೇಹಗಳನ್ನು ಗುರುತಿಸಲು ಡಿಎನ್ಎ ಪರೀಕ್ಷೆ ನಡೆಸಲಾಗುವುದು ಎಂದವರು ಹೇಳಿದ್ದಾರೆ.

Similar News