ಮತ್ತೊಂದು ಸಾಂಕ್ರಾಮಿಕದ ಅಪಾಯ ಎದುರಿಸಲು ವಿಶ್ವ ಸಿದ್ಧವಾಗಿಲ್ಲ: ರೆಡ್ ಕ್ರಾಸ್ ಎಚ್ಚರಿಕೆ

Update: 2023-01-30 17:15 GMT

ಜಿನೆವಾ, ಜ.30: ಮುಂದಿನ ಸಾಂಕ್ರಾಮಿಕ ಎದುರಿಸಲು  ಎಲ್ಲಾ ದೇಶಗಳೂ ಸೂಕ್ತ ರೀತಿಯಲ್ಲಿ ಸಿದ್ಧವಾಗಿಲ್ಲ. ಸಾಂಕ್ರಾಮಿಕ ಎದುರಿಸುವಲ್ಲಿ  ಬಲಿಷ್ಟ ಸನ್ನದ್ಧತೆ ವ್ಯವಸ್ಥೆಯ ಕೊರತೆ ತೀವ್ರವಾಗಿದೆ. ಭವಿಷ್ಯದಲ್ಲಿ ಆರೋಗ್ಯ ಬಿಕ್ಕಟ್ಟು ಮತ್ತು ಹವಾಮಾನ ಸಂಬಂಧಿ ಬಿಕ್ಕಟ್ಟು ಏಕಕಾಲದಲ್ಲಿ ಸಂಭವಿಸುವ ಸಾಧ್ಯತೆಯಿದೆ ಎಂದು ರೆಡ್ಕ್ರಾಸ್ ಸೋಮವಾರ ಎಚ್ಚರಿಕೆ ನೀಡಿದೆ.

ಕೋವಿಡ್ ಸಾಂಕ್ರಾಮಿಕದ ಮೂರು `ಕ್ರೂರ ವರ್ಷಗಳ' ಹೊರತಾಗಿಯೂ, ಬಲಿಷ್ಟ ಸಿದ್ಧತಾ ವ್ಯವಸ್ಥೆಯ ಕೊರತೆಯಿದೆ. ವಿಶ್ವಾಸ ಮತ್ತು ನ್ಯಾಯದ ವಾತಾವರಣ  ನಿರ್ಮಾಣ , ಸ್ಥಳೀಯ ಕಾರ್ಯಜಾಲ ನಿರ್ಮಿಸುವುದು ಮುಂದಿನ ಬಿಕ್ಕಟ್ಟು ಎದುರಿಸುವಲ್ಲಿನ ಸಿದ್ಧತೆಯ ಭಾಗವಾಗಿದೆ ಎಂದು ವಿಶ್ವದ ಅತ್ಯಂತ ದೊಡ್ಡ ಮಾನವೀಯ ಜಾಲ `ಇಂಟರ್ನ್ಯಾಷನಲ್ ಫೆಡರೇಷನ್ ಆಫ್ ರೆಡ್ಕ್ರಾಸ್ ಆ್ಯಂಡ್ ರೆಡ್ಕ್ರೆಸೆಂಟ್ ಸೊಸೈಟೀಸ್(IFRC) ಯ ವರದಿ ಹೇಳಿದೆ.

ಸಾಂಕ್ರಾಮಿಕದ ಅಪಾಯ ಎದುರಿಸುವಲ್ಲಿನ ಸರಕಾರಗಳ ಸಿದ್ಧತೆ 2019ರಲ್ಲಿ ಇದ್ಧ ಸ್ಥಿತಿಗಿಂತ ಭಿನ್ನವಾಗಿಲ್ಲ. ಏಕಕಾಲದಲ್ಲಿ ಸಂಭವಿಸುವ ವಿವಿಧ ರೀತಿಯ ವಿಪತ್ತುಗಳನ್ನು ಎದುರಿಸಲು ಸಮಾಜಗಳು ಸನ್ನದ್ಧಗೊಂಡಿದ್ದರೆ ಮಾತ್ರ ಚೇತರಿಕೆ ಸಾಧ್ಯ ಎಂದು ವರದಿ ತಿಳಿಸಿದೆ.

ಈ ಶತಮಾನದಲ್ಲಿ ಹವಾಮಾನ ಸಂಬಂಧಿತ ವಿಪತ್ತುಗಳು ಮತ್ತು ರೋಗ ಹರಡುವ ಅಲೆಗಳ ಏರಿಕೆಯನ್ನು ಐಎಫ್ಆರ್ಸಿ ಉಲ್ಲೇಖಿಸಿದ್ದು ಇದರಲ್ಲಿ ಕೋವಿಡ್-19 ಕೇವಲ ಒಂದು ವಿಪತ್ತು ಆಗಿದೆ. ಹವಾಮಾನ ವೈಪರೀತ್ಯದ ದುರಂತಗಳು ಆಗಿಂದಾಗ್ಗೆ  ಮರುಕಳಿಸುತ್ತಿದ್ದು ಇವುಗಳಿಗೆ ಪ್ರತಿಕ್ರಿಯಿಸುವ ಸಾಮಥ್ರ್ಯ ಸೀಮಿತವಾಗಿದೆ. ಕೋವಿಡ್-19 ಸಾಂಕ್ರಾಮಿಕವು, ಮುಂದಿನ ಸಾಂಕ್ರಾಮಿಕಕ್ಕೆ ಸನ್ನದ್ಧವಾಗಲು ಜಗತ್ತಿಗೆ ಎಚ್ಚರಿಕೆಯ ಗಂಟೆಯಾಗಬೇಕಿದೆ. ಬಹುತೇಕ ಬಿಕ್ಕಟ್ಟುಗಳು  ಬಡ ಮತ್ತು ದುರ್ಬಲ ವರ್ಗದವರ ಮೇಲೆ ಹೆಚ್ಚಿನ ಮಟ್ಟದಲ್ಲಿ ಪರಿಣಾಮ ಬೀರುತ್ತವೆ. ಮತ್ತೊಂದು ಸಾಂಕ್ರಾಮಿಕದ ಅಪಾಯ ಸನಿಹದಲ್ಲಿರುವ ಸಾಧ್ಯತೆಯಿದೆ. ಆದರೆ ನಾವದಕ್ಕೆ ಸೂಕ್ತ ರೀತಿಯಲ್ಲಿ ಸಿದ್ಧವಾಗಿಲ್ಲ. 

ಮುಂದಿನ ಬಿಕ್ಕಟ್ಟು ಸಂಭವಿಸುವ ಮುನ್ನವೇ ಅರೋಗ್ಯ ಕ್ಷೇತ್ರದಲ್ಲಿನ ಅಸಮಾನತೆ, ಸಾಮಾಜಿಕ-ಆರ್ಥಿಕ ದುರ್ಬಲತೆಯ ಸಮಸ್ಯೆಯನ್ನು ಜಾಗತಿಕ ಸಮುದಾಯ ನಿವಾರಿಸಿಕೊಳ್ಳಬೇಕಾಗಿದೆ. ಸಾಂಕ್ರಾಮಿಕ ರೋಗಗಳು ಪ್ರಾರಂಭಗೊಳ್ಳುವ ಮತ್ತು ಅಂತ್ಯಗೊಳ್ಳುವ ಸ್ಥಳೀಯ ಸಮುದಾಯಗಳು ಜೀವ ಉಳಿಸುವ ಕಾರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಎಲ್ಲಾ ದೇಶಗಳೂ ಪ್ರತೀ ವರ್ಷ ತಮ್ಮ ಜಿಡಿಪಿಯ 1%ದಷ್ಟನ್ನು ಆರೋಗ್ಯ ಕ್ಷೇತ್ರಕ್ಕೆ ಮೀಸಲಿಡಬೇಕು ಎಂದು ವರದಿ ಹೇಳಿದೆ.

Similar News