ಎಟಿಪಿ ರ‍್ಯಾಂಕಿಂಗ್: ನಂ.1 ಸ್ಥಾನಕ್ಕೆ ಮರಳಿದ ಜೊಕೊವಿಕ್

Update: 2023-01-30 18:25 GMT

ಮೆಲ್ಬೋರ್ನ್, ಜ.30: ದಾಖಲೆ 10ನೇ ಬಾರಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆದ್ದಿರುವ ಸರ್ಬಿಯದ ಸೂಪರ್ಸ್ಟಾರ್ ನೊವಾಕ್ ಜೊಕೊವಿಕ್ ಸೋಮವಾರ ಬಿಡುಗಡೆಯಾದ ಎಟಿಪಿ ರ‍್ಯಾಂಕಿಂಗ್​ನಲ್ಲಿ ನಂ.1 ಸ್ಥಾನಕ್ಕೆ ಮರಳಿದ್ದಾರೆ.

ಜೊಕೊವಿಕ್ ರವಿವಾರ ನಡೆದ ಫೈನಲ್‌ನಲ್ಲಿ ಗ್ರೀಸ್ ಆಟಗಾರ ಸ್ಟೆಫನೊಸ್ ಸಿಟ್ಸಿಪಾಸ್ ಅನ್ನು 6-3, 7-6(4), 7-6(5) ಸೆಟ್ಗಳ ಅಂತರದಿಂದ ಮಣಿಸಿ ರಫೆಲ್ ನಡಾಲ್ ಅವರ ಸಾರ್ವಕಾಲಿಕ ಶ್ರೇಷ್ಠ ಗ್ರಾನ್ಸ್ಲಾಮ್ ಪ್ರಶಸ್ತಿ ದಾಖಲೆ(22)ಯನ್ನು ಸರಿಗಟ್ಟಿದ್ದರು.

ಹಾಲಿ ಯುಎಸ್ ಓಪನ್ ಚಾಂಪಿಯನ್ ಕಾರ್ಲೊಸ್ ಅಲ್ಕರಾಝ್ ನಂ.1 ರ್ಯಾಂಕನ್ನು ಕಳೆದುಕೊಂಡರು. ಆಸ್ಟ್ರೇಲಿಯನ್ ಓಪನ್ನಿಂದ ಹೊರಗುಳಿದಿದ್ದ ಅಲ್ಕರಾಝ್ ಸದ್ಯ 2ನೇ ಸ್ಥಾನದಲ್ಲಿದ್ದಾರೆ.

ವೃತ್ತಿಜೀವನದಲ್ಲಿ 2ನೇ ಬಾರಿ ಗ್ರಾನ್ಸ್ಲಾಮ್ ಫೈನಲ್ಗೆ ತಲುಪಿದ್ದ 24ರ ವಯಸ್ಸಿನ ಸಿಟ್ಸಿಪಾಸ್ ಒಂದು ಸ್ಥಾನ ಮೇಲಕ್ಕೇರಿ ವಿಶ್ವದ ನಂ.3ನೇ ಸ್ಥಾನ ತಲುಪಿ ಜೀವನಶ್ರೇಷ್ಠ ರ್ಯಾಂಕಿಂಗ್ಗೆ ವಾಪಸಾಗಿದ್ದಾರೆ.

ಕಳೆದ 2 ವರ್ಷ ಮೆಲ್ಬೋರ್ನ್ನಲ್ಲಿ ರನ್ನರ್ಸ್ ಅಪ್ ಆಗಿದ್ದ ಡೇನಿಯಲ್ ಮೆಡ್ವೆಡೆವ್ ಅಗ್ರ-10ರಿಂದ ಹೊರಗುಳಿದಿದ್ದಾರೆ. ಈ ಬಾರಿಯ ಆಸ್ಟ್ರೇಲಿಯನ್ ಓಪನ್ನಲ್ಲಿ ಅವರು 3ನೇ ಸುತ್ತಿನಲ್ಲಿ ಅಮೆರಿಕದ ಸೆಬಾಸ್ಟಿಯನ್ ಕೋರ್ಡಾಗೆ ಸೋತಿದ್ದರು.

► ಡಬ್ಲ್ಯೂಟಿಎ ರ‍್ಯಾಂಕಿಂಗ್ 2ನೇ ಸ್ಥಾನಕ್ಕೇರಿದ ಸಬಲೆಂಕಾ

ಪ್ಯಾರಿಸ್, ಜ.30: ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಅರ್ಯನಾ ಸಬಲೆಂಕಾ ಸೋಮವಾರ ಬಿಡುಗಡೆಯಾಗಿರುವ ಡಬ್ಲ್ಯೂಟಿಎ ರ‍್ಯಾಂಕಿಂಗ್​ನಲ್ಲಿ ದ್ವಿತೀಯ ಸ್ಥಾನಕ್ಕೇರಿದ್ದಾರೆ. ಪೋಲ್ಯಾಂಡ್ನ ಇಗಾ ಸ್ವಿಯಾಟೆಕ್ ನಂ.1 ಸ್ಥಾನ ಕಾಯ್ದುಕೊಂಡಿದ್ದಾರೆ.

ಮೊದಲ ಬಾರಿ ಗ್ರಾನ್ಸ್ಲಾಮ್ನಲ್ಲಿ ಸಿಂಗಲ್ಸ್ ಪ್ರಶಸ್ತಿ ಜಯಿಸಿದ ಕಾರಣ ಸಬಲೆಂಕಾ 2 ಸ್ಥಾನ ಭಡ್ತಿ ಪಡೆದು 2021ರ ನಂತರ ಜೀವನಶ್ರೇಷ್ಠ ರ್ಯಾಂಕ್ ತಲುಪಿದರು. ಟ್ಯುನಿಶಿಯದ ಓನ್ಸ್ ಜಬೆರ್ 3ನೇ ಸ್ಥಾನದಲ್ಲಿದ್ದರೆ, ಅಮೆರಿಕದ ಜೆಸ್ಸಿಕಾ ಪೆಗುಲಾ ಹಾಗೂ ಫ್ರಾನ್ಸ್ನ ಕರೊಲಿನ್ ಗಾರ್ಸಿಯಾ ಕ್ರಮವಾಗಿ 4ನೇ ಹಾಗೂ 5ನೇ ಸ್ಥಾನಕ್ಕೆ ಕುಸಿದಿದ್ದಾರೆ. ಮೆಲ್ಬೋರ್ನ್ನಲ್ಲಿ ಶನಿವಾರ ನಡೆದಿದ್ದ ಫೈನಲ್ನಲ್ಲಿ ಸಬಲೆಂಕಾ ವಿರುದ್ಧ ಸೋತಿದ್ದ ಕಝಕ್ನ ಎಲೆನಾ ರೈಬಾಕಿನಾ 15 ಸ್ಥಾನ ಮೇಲಕ್ಕೇರಿ ಜೀವನಶ್ರೇಷ್ಠ 10ನೇ ಸ್ಥಾನ ತಲುಪಿದ್ದಾರೆ.

Similar News