4ನೇ ಬಾರಿ ಅಲನ್ ಬಾರ್ಡರ್ ಪದಕ ಜಯಿಸಿದ ಸ್ಟೀವ್ ಸ್ಮಿತ್

Update: 2023-01-30 18:27 GMT

ಸಿಡ್ನಿ, ಜ.30: ಆಸ್ಟ್ರೇಲಿಯದ ‘ರನ್ ಯಂತ್ರ’ ಸ್ಟೀವ್ ಸ್ಮಿತ್ ಸೋಮವಾರ ನಾಲ್ಕನೇ ಬಾರಿ ಅಲನ್ ಬಾರ್ಡರ್ ಪದಕವನ್ನು ಗೆದ್ದುಕೊಂಡಿದ್ದಾರೆ. ರಿಕಿ ಪಾಂಟಿಂಗ್ ಹಾಗೂ ಮೈಕಲ್ ಕ್ಲಾರ್ಕ್ ನಂತರ ಈ ಸಾಧನೆ ಮಾಡಿದ ಮೂರನೇ ಆಟಗಾರನಾಗಿದ್ದಾರೆ.

ಸ್ಮಿತ್ ಪರ 171 ಮತಗಳು ಚಲಾವಣೆಯಾಗಿದ್ದರೆ, ಅವರ ಪ್ರತಿಸ್ಪರ್ಧಿ ಟ್ರೆವಿಸ್ ಹೆಡ್ 144 ಮತ ಪಡೆಯಲು ಶಕ್ತರಾಗಿದ್ದಾರೆ. ಈ ಹಿಂದೆ 2015, 2018 ಹಾಗೂ 2021ರಲ್ಲಿ ಪದಕ ಜಯಿಸಿದ್ದ ಸ್ಮಿತ್ ಇದೀಗ 4ನೇ ಬಾರಿ ಪ್ರತಿಷ್ಠಿತ ಪದಕ ತನ್ನದಾಗಿಸಿಕೊಂಡಿದ್ದಾರೆ.

ಮತದಾನದ ಅವಧಿಯಲ್ಲಿ ಮಾಜಿ ನಾಯಕ ಸ್ಮಿತ್ 4 ಶತಕ ಸಹಿತ ಒಟ್ಟು 1,254 ರನ್ ಗಳಿಸಿದ್ದರು. ಆಸ್ಟ್ರೇಲಿಯವು ಟೆಸ್ಟ್ ರ್ಯಾಂಕಿಂಗ್ನಲ್ಲಿ ನಂ.1 ಸ್ಥಾನಕ್ಕೇರಲು ನಿರ್ಣಾಯಕ ಪಾತ್ರವಹಿಸಿದ್ದರು.

ವರ್ಷದ ಟೆಸ್ಟ್ ಆಟಗಾರನಿಗೆ ನೀಡುವ ಶೇನ್ ವಾರ್ನ್ ಪ್ರಶಸ್ತಿಯು ಓಪನರ್ ಉಸ್ಮಾನ್ ಖ್ವಾಜಾ ಪಾಲಾಯಿತು. ಖ್ವಾಜಾ ಕಳೆದೊಂದು ವರ್ಷದಲ್ಲಿ 78.46ರ ಸರಾಸರಿಯಲ್ಲಿ 1,020 ರನ್ ಗಳಿಸಿದ್ದಾರೆ.
ಮಹಿಳಾ ಕ್ರಿಕೆಟರ್ ಬೆಥ್ ಮೂನಿ 2ನೇ ಬಾರಿ ಆಸ್ಟ್ರೇಲಿಯದ ಶ್ರೇಷ್ಠ ಆಟಗಾರ್ತಿಗೆ ನೀಡುವ ಬೆಲಿಂಡಾ ಕ್ಲಾರ್ಕ್ ಪ್ರಶಸ್ತಿಯನ್ನು ಸ್ವೀಕರಿಸಿದರು. ಮೂನಿ ಎಲ್ಲ 3 ಮಾದರಿಯ ಕ್ರಿಕೆಟ್ನಲ್ಲಿ ಸ್ಥಿರ ಪ್ರದರ್ಶನ ನೀಡಿದ್ದಾರೆ.

Similar News